×
Ad

ಚಂದ್ರಗ್ರಹಣ | ದೇಶಾದ್ಯಂತ ‘ರಕ್ತ ಚಂದ್ರ’ದ ವಿಸ್ಮಯ ದೃಶ್ಯ

ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಸಂಪೂರ್ಣ ಚಂದ್ರಗ್ರಹಣ ದರ್ಶನ

Update: 2025-09-08 00:17 IST

 Photo Credit: Biswaranjan Rout / thehindu

ಬೆಂಗಳೂರು: ಭಾರತೀಯ ಆಕಾಶ ವೀಕ್ಷಕರಿಗೆ ಅಪರೂಪದ ಖಗೋಳಿಕ ವಿಸ್ಮಯ ಎದುರಾಯಿತು. ಸೆಪ್ಟೆಂಬರ್ 7 ಮತ್ತು 8, 2025ರಂದು ದೇಶಾದ್ಯಂತ ಸಂಪೂರ್ಣ ಚಂದ್ರಗ್ರಹಣ ವೀಕ್ಷಣೆಗೆ ಲಭ್ಯವಾಯಿತು.

ಈ ಸಂದರ್ಭದಲ್ಲಿ ಚಂದ್ರನು ಕೆಂಪು-ಕಿತ್ತಳೆ ಬಣ್ಣಕ್ಕೆ ತಿರುಗುವ ಕಾರಣದಿಂದ ಇದನ್ನು “ರಕ್ತ ಚಂದ್ರ” ಎಂದು ಕರೆಯಲಾಗುತ್ತದೆ.

ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಭಾರತದ ಪ್ರಮುಖ ನಗರಗಳ ಆಕಾಶದಲ್ಲಿ ಈ ಅಪೂರ್ವ ಗ್ರಹಣವು ಸ್ಪಷ್ಟವಾಗಿ ಗೋಚರಿಸಿತು. ಅಲ್ಲದೆ, ಏಷ್ಯಾ, ಪಶ್ಚಿಮ ಆಸ್ಟ್ರೇಲಿಯಾ ಹಾಗೂ ಯುರೋಪಿನ ಅನೇಕ ಭಾಗಗಳಲ್ಲಿಯೂ ಈ ಅದ್ಭುತ ಚಂದ್ರಗ್ರಹಣ ವೀಕ್ಷಿಸಲು ಅವಕಾಶ ಸಿಕ್ಕಿತು.

ಸಂಪೂರ್ಣ ಚಂದ್ರಗ್ರಹಣದ ವೇಳೆ ಚಂದ್ರನು ಭೂಮಿಯ ನೆರಳಿನಲ್ಲಿ ಸಂಪೂರ್ಣ ಮುಳುಗುತ್ತಾನೆ. ಈ ಸಂದರ್ಭದಲ್ಲಿ ಭೂಮಿಯ ವಾತಾವರಣವು ಸೂರ್ಯನ ಬೆಳಕನ್ನು ತಿರುಗಿಸಿ ಚಂದ್ರನ ಮೇಲ್ಮೈ ಮೇಲೆ ಬೀಳಿಸುತ್ತದೆ. ನೀಲಿ ಬೆಳಕಿನ ತರಂಗ ದೈರ್ಘ್ಯವು ವಾತಾವರಣದಲ್ಲಿ ಹೆಚ್ಚು ಚದರಲ್ಪಡುವುದರಿಂದ, ಚಂದ್ರನು ಕೆಂಪು-ಕಿತ್ತಳೆ ಬಣ್ಣದಲ್ಲಿ ಹೊಳೆಯುವಂತೆ ಕಾಣುತ್ತದೆ.

ತಜ್ಞರ ಪ್ರಕಾರ, ಈ ಬಾರಿ ಗ್ರಹಣವು ಚಂದ್ರನಿಂದ, ಭೂಮಿಗೆ ಅತೀ ಹತ್ತಿರದ ಬಿಂದುವಿಗೆ ಕೇವಲ 2.7 ದಿನಗಳ ಮೊದಲು ಸಂಭವಿಸುತ್ತಿರುವುದರಿಂದ, ಚಂದ್ರ ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡದಾಗಿ ಗೋಚರಿಸಿತು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಸ್ಟ್ರೋನಮಿಯ ತಜ್ಞರ ಅಭಿಪ್ರಾಯದಂತೆ, ಈ ಸಂಪೂರ್ಣ ಚಂದ್ರಗ್ರಹಣವು ಇತ್ತೀಚಿನ ವರ್ಷಗಳಲ್ಲಿ ವೀಕ್ಷಿಸಲು ಸಿಗುವ ಅತ್ಯಂತ ಸ್ಪಷ್ಟ “ರಕ್ತ ಚಂದ್ರ”ಗಳಲ್ಲಿ ಒಂದಾಗಲಿದೆ.

ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8:58 ಕ್ಕೆ ಚಂದ್ರಗ್ರಹಣ ಪ್ರಾರಂಭಗೊಂಡಿದ್ದು, ಈಗ ಅದು ತನ್ನ ಅತ್ಯಂತ ನಿರೀಕ್ಷಿತ ರಕ್ತ ಚಂದ್ರ ಹಂತದತ್ತ ಸಾಗುತ್ತಿದೆ. ಸಂಪೂರ್ಣ ಗ್ರಹಣ ರಾತ್ರಿ 11:00 ಕ್ಕೆ ಪ್ರಾರಂಭವಾಗಿ, 11:41 ಕ್ಕೆ ಗರಿಷ್ಠ ಹಂತ ತಲುಪಿತು. ಮಧ್ಯರಾತ್ರಿ 12:22 ರವರೆಗೆ ಸಂಪೂರ್ಣತೆ ಮುಂದುವರಿಯಲಿದ್ದು, ಸಂಪೂರ್ಣ ಚಂದ್ರಗ್ರಹಣವು ಬೆಳಿಗ್ಗೆ 2:25 ಕ್ಕೆ ಕೊನೆಗೊಳ್ಳಲಿದೆ.

ದೇಶದ ಎಲ್ಲಾ ರಾಜ್ಯಗಳಲ್ಲಿ ಗೋಚರಿಸುತ್ತಿರುವ ಈ ಅಪರೂಪದ ಖಗೋಳ ಘಟನೆಯು ವಿಜ್ಞಾನಿಗಳು, ಖಗೋಳಶಾಸ್ತ್ರ ಪ್ರಿಯರು ಮತ್ತು ಸಾಮಾನ್ಯ ಜನರನ್ನು ಸಮಾನವಾಗಿ ಆಕರ್ಷಿಸಿದೆ. ಹಲವೆಡೆ ಸಾರ್ವಜನಿಕ ವೀಕ್ಷಣಾ ಕಾರ್ಯಕ್ರಮಗಳು, ವೀಕ್ಷಣಾ ಶಿಬಿರಗಳು ಮತ್ತು ನೇರ ಪ್ರಸಾರಗಳ ಮೂಲಕ ಚಂದ್ರಗ್ರಹಣದ ವೈಭವವನ್ನು ಕಣ್ತುಂಬಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಇಂದು ರಾತ್ರಿಯ ರಕ್ತ ಚಂದ್ರ ದೇಶಾದ್ಯಂತ ಆಕಾಶ ವೀಕ್ಷಕರಿಗೆ ಒಂದು ಐತಿಹಾಸಿಕ ಕ್ಷಣವಾಗಿದ್ದು, ಖಗೋಳಶಾಸ್ತ್ರದ ಅಭಿಮಾನಿಗಳಿಗೆ ಮರೆಯಲಾಗದ ಅನುಭವವನ್ನು ನೀಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News