ಮಧ್ಯಪ್ರದೇಶದಿಂದ ಬೃಹತ್ ಪ್ರಮಾಣದಲ್ಲಿ ನಿಷೇಧಿತ ಔಷಧಿಗಳ ಖರೀದಿ : ಸಿಎಜಿ ವರದಿ ಬಯಲು
ಸಾಂದರ್ಭಿಕ ಚಿತ್ರ | Photo Credit : freepik.com
ಹೊಸದಿಲ್ಲಿ, ಅ.10:ಕೆಮ್ಮಿನ ಸಿರಪ್ ಸೇವನೆಯಿಂದ ರಾಜ್ಯದಲ್ಲಿ 23 ಮಕ್ಕಳು ದಾರುಣವಾಗಿ ಮೃತಪಟ್ಟ ಆಘಾತದಿಂದ ಮಧ್ಯಪ್ರದೇಶವು ಹೊರಬರುವ ಮುನ್ನವೇ ರಾಜ್ಯದ ಔಷಧಿ ನಿಯಂತ್ರಣ ಹಾಗೂ ಖರೀದಿ ವ್ಯವಸ್ಥೆಯಲ್ಲಿ ಭಾರೀ ಲೋಪ ಉಂಟಾಗಿರುವುದನ್ನು ಸಿಎಜಿ ವರದಿ ಬಯಲಿಗೆಳೆದಿದೆ.
ಭಾರತ ಸರಕಾರವು ಮಾನವ ಬಳಕೆಗೆ ನಿಷೇಧಿಸಿದ್ದ ಔಷಧಿಗಳ ಖರೀದಿ ಹಾಗೂ ವಿತರಣೆಯನ್ನು ಮಧ್ಯಪ್ರದೇಶ ಸಾರ್ವಜನಿಕ ಆರೋಗ್ಯ ಸೇವಾ ನಿಗಮ ಲಿಮಿಟೆಡ್ (ಎಂಪಿಪಿಎಚ್‌ಎಸ್‌ಸಿಎಲ್) ಮುಂದುವರಿಸಿದ್ದು, ಸಾರ್ವಜನಿಕರ ಆರೋಗ್ಯವನ್ನು ಅಪಾಯಕ್ಕೆ ದೂಡಿದೆ ಎಂದು 2024-25ರ ಸಾಲಿನ ಸಿಎಜಿ ವರದಿ ತಿಳಿಸಿದೆ.
ಈ ನಿಷೇಧಿತ ಔಷಧಿಗಳನ್ನು ಖರೀದಿಸಲು ನಿಗಮವು 2017 ಹಾಗೂ 2022ರ ನಡುವೆ 1.5 ಕೋಟಿ ರೂ. ಮೌಲ್ಯದ ಔಷಧಿ ಕಂಪೆನಿಗಳ ಜೊತೆ ಒಪ್ಪಂದವನ್ನು ಏರ್ಪಡಿಸಿಕೊಂಡಿದೆ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ಟೆಂಡರ್‌ಗಳ ಮೂಲಕ 22.9 ಲಕ್ಷ ರೂ. ಮೌಲ್ಯದ ಔಷಧಿಗಳನ್ನು ಖರೀದಿಸಿದೆ. ಕೇಂದ್ರ ಸರಕಾರದಿಂದ ನಿಷೇಧಿಸಲ್ಪಟ್ಟ ಈ ಔಷಧಿಗಳ ಖರೀದಿ ಮೌಲ್ಯ 1.8 ಕೋಟಿ ರೂ. ಆಗಿದೆ.
ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರ ಮಂಡಳಿ (ಸಿಡಿಎಸ್‌ಸಿಓ)ಯು 1940ರ ಔಷಧಿಗಳು ಹಾಗೂ ಪ್ರಸಾಧನಗಳ ಕಾಯ್ದೆಯಡಿ 518 ಔಷಧಿಗಳ ಸಂಯೋಜನೆಯ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ಮಾನವ ಬಳಕೆಗೆ ಈ ಔಷಧಿಗಳ ತಯಾರಿಕೆ, ಮಾರಾಟ ಹಾಗೂ ವಿತರಣೆಯನ್ನು ನಿಷೇಧಿಸಿತ್ತು.
ಇವೆಲ್ಲದರ ಹೊರತಾಗಿಯೂ ಎಪಿಪಿಎಚ್‌ಎಸ್‌ಸಿಎಲ್ ಈ ಔಷಧಿಗಳ ದರ ಗುತ್ತಿಗೆಯನ್ನು ಕಾರ್ಯಗತಗೊಳಿಸಿದ್ದಲ್ಲದೆ, ರಾಜ್ಯ ಆರೋಗ್ಯ ಸಂಸ್ಥೆಗಳಿಂದ ಅವುಗಳ ಖರೀದಿಗೂ ಅವಕಾಶ ಮಾಡಿಕೊಟ್ಟಿತ್ತು.
ಒಂದು ವೇಳೆ ನಿಗಂ ಹಾಗೂ ಆರೋಗ್ಯ ಇಲಾಖೆಯು ಜಾಗರೂಕತೆ ವಹಿಸಿ ಟೆಂಡರ್‌ಗಳ ಪಟ್ಟಿಯಿಂದ ಈ ಔಷಧಿಗಳನ್ನು ಕೈಬಿಟ್ಟಲ್ಲಿ ಅವುಗಳ ಖರೀದಿಯನ್ನು ತಪ್ಪಿಸಬಹುದಿತ್ತು ಎಂದು ಹೇಳಿದರು.