×
Ad

ಅಲ್-ಫಲಾಹ್ ಗ್ರೂಪ್ ಅಧ್ಯಕ್ಷರಿಗೆ ಸಂಬಂಧಿಸಿದ ಕಟ್ಟಡದ ನೆಲಸಮಕ್ಕೆ ಮಧ್ಯಪ್ರದೇಶ ಹೈಕೋರ್ಟ್ ತಡೆ

Update: 2025-11-22 22:08 IST

 ಜವಾದ್ ಸಿದ್ದೀಕಿ | Photo Credit : indiatoday.in

ಭೋಪಾಲ,ನ.22: ಅಲ್-ಫಲಾಹ್ ಗ್ರೂಪ್‌ ನ ಅಧ್ಯಕ್ಷ ಜವಾದ್ ಸಿದ್ದೀಕಿ ಅವರಿಗೆ ಸಂಬಂಧಿಸಿದ ಮಹುದಲ್ಲಿಯ ಮನೆಯ ನೆಲಸಮಕ್ಕೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು 15 ದಿನಗಳ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ.

ನ.10ರಂದು ದಿಲ್ಲಿಯ ಕೆಂಪು ಕೋಟೆ ಬಳಿ ಸಂಭವಿಸಿದ್ದ ಸ್ಫೋಟ ಮತ್ತು ಅಲ್-ಫಲಾಹ್ ಮೆಡಿಕಲ್ ಕಾಲೇಜಿನ ನಡುವೆ ಆರೋಪಿತ ನಂಟಿನ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಸಿದ್ದೀಕಿ ಅವರೂ ತನಿಖಾ ಸಂಸ್ಥೆಯ ನಿಗಾದಲ್ಲಿದ್ದಾರೆ.

ಮಹು ಕಂಟೋನ್ಮೆಂಟ್ ಬೋರ್ಡ್ ಮೂರು ದಿನಗಳಲ್ಲಿ ಅಕ್ರಮ ನಿರ್ಮಾಣವನ್ನು ತೆಗೆದುಹಾಕುವಂತೆ ಜಾರಿಗೊಳಿಸಿರುವ ನೋಟಿಸನ್ನು ಪ್ರಶ್ನಿಸಿ ಮನೆಯ ಪ್ರಸ್ತುತ ಮಾಲಿಕ ಅಬ್ದುಲ್ ಮಜೀದ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.

ಆಸ್ತಿಗೆ ಸಂಬಂಧಿಸಿದಂತೆ ಹಿಂದಿನ ನೋಟಿಸ್‌ಗಳನ್ನು 1996-97ರಲ್ಲಿ ಹೊರಡಿಸಲಾಗಿತ್ತು ಎನ್ನುವುದನ್ನು ಗಮನಿಸಿದ ನ್ಯಾ.ಪ್ರಣಯ್ ವರ್ಮಾ ಅವರು, ಅಧಿಕಾರಿಗಳು ಸುಮಾರು 30 ವರ್ಷಗಳ ಬಳಿಕ ಕ್ರಮಕ್ಕೆ ಮುಂದಾಗಿದ್ದರೆ ಅರ್ಜಿದಾರರ ಅಹವಾಲು ಆಲಿಸಲು ಸೂಕ್ತ ಅವಕಾಶವನ್ನು ನೀಡಬೇಕಿತ್ತು ಎಂದು ಹೇಳಿದರು.

ಅರ್ಜಿಯ ಪ್ರಕಾರ ಮನೆಯು ಮೂಲತಃ ಸಿದ್ದೀಕಿಯವರ ತಂದೆ ಅಹ್ಮದ್ ಅವರಿಗೆ ಸೇರಿದ್ದು, ಅವರು ನಂತರ ಅದನ್ನು ಸಿದ್ದೀಕಿಯವರಿಗೆ ವರ್ಗಾಯಿಸಿದ್ದರು. ಸಿದ್ದೀಕಿ 2021ರಲ್ಲಿ ಅದನ್ನು ಮಜೀದ್‌ಗೆ ಉಡುಗೊರೆಯಾಗಿ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News