ಮಹಾರಾಷ್ಟ್ರ | 225 ಜಿಬಿಎಸ್ ಪ್ರಕರಣಗಳು ಪತ್ತೆ,12 ಮೃತ್ಯು
ಸಾಂದರ್ಭಿಕ ಚಿತ್ರ | PC : freepik.com
ಮುಂಬೈ: ಮಹಾರಾಷ್ಟ್ರದಲ್ಲಿ 197 ದೃಢೀಕೃತ ಮತ್ತು 28 ಶಂಕಿತ ಪ್ರಕರಣಗಳು ಸೇರಿದಂತೆ ಈವರೆಗೆ ಒಟ್ಟು 225 ಗಿಲಾಯಿನ್-ಬಾರಿ ಸಿಂಡ್ರೋಮ್ (ಜಿಬಿಎಸ್) ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರ ಆರೋಗ್ಯ ಅಧಿಕಾರಿಗಳ ಪ್ರಕಾರ ಈ ರೋಗದಿಂದ 12 ಸಾವುಗಳು ಸಂಭವಿಸಿವೆ, ಈ ಪೈಕಿ ಆರು ಪ್ರಕರಣಗಳು ದೃಢ ಪಟ್ಟಿದ್ದು, ಇತರ ಆರು ಶಂಕಿತ ಪ್ರಕರಣಗಳಾಗಿವೆ.
ವರದಿಯಾದ ಪ್ರಕರಣಗಳಲ್ಲಿ 179 ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 24 ವ್ಯಕ್ತಿಗಳು ಈಗಲೂ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ದಾಖಲಾಗಿದ್ದು, 15 ಜನರಿಗೆ ವೆಂಟಿಲೇಟರ್‌ಗಳನ್ನು ಅಳವಡಿಸಲಾಗಿದೆ.
ಪುಣೆ ಮಹಾನಗರ ಪಾಲಿಕೆಗೆ ಇತ್ತೀಚಿಗೆ ಸೇರ್ಪಡೆಗೊಂಡ ಗ್ರಾಮಗಳು, ಪಿಂಪ್ರಿ ಚಿಂಚವಾಡ ನಗರಸಭೆ, ಪುಣೆ ಗ್ರಾಮೀಣ ಮತ್ತು ಇತರ ಜಿಲ್ಲೆಗಳು ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಜಿಬಿಎಸ್ ಪ್ರಕರಣಗಳು ವರದಿಯಾಗಿವೆ.
ಪರಿಸ್ಥಿತಿಯ ಮೇಲೆ ನಿಕಟ ನಿಗಾಯಿರಿಸಿರುವ ಆರೋಗ್ಯ ಅಧಿಕಾರಿಗಳು, ಜಾಗ್ರತೆ ವಹಿಸುವಂತೆ ಆಸ್ಪತ್ರೆಗಳಿಗೆ ಆಗ್ರಹಿಸಿದ್ದಾರೆ.
ಐಬಿಎಸ್ ಅಪರೂಪದ ನರವೈಜ್ಞಾನಿಕ ಅಸ್ವಸ್ಥತೆಯಾಗಿದ್ದು, ಸ್ನಾಯು ದೌರ್ಬಲ್ಯ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು.
ಹೆಚ್ಚಿನ ರೋಗಿಗಳು ಸಕಾಲಿಕ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಾರಾದರೂ, ಗಂಭೀರ ಪ್ರಕರಣಗಳಲ್ಲಿ ದೀರ್ಘಕಾಲಿಕ ಆಸ್ಪತ್ರೆ ವಾಸ ಮತ್ತು ವೆಂಟಿಲೇಟರ್ ಬೆಂಬಲ ಅಗತ್ಯವಾಗಬಹುದು.
ಮಹಾರಾಷ್ಟ್ರದಲ್ಲಿ ಜಿಬಿಎಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆಯು ಪಿಡುಗನ್ನು ನಿಯಂತ್ರಿಸಲು ಮತ್ತು ಇನ್ನಷ್ಟು ಹರಡುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.