×
Ad

ಮಹಾರಾಷ್ಟ್ರ: ಭಾರೀ ಮಳೆ; 8 ಮಂದಿ ಸಾವು

ರೈಲು, ವಿಮಾನ, ವಾಹನ ಸಂಚಾರ ಅಸ್ತವ್ಯಸ್ತ

Update: 2025-08-19 21:28 IST

PC : PTI 

ಮುಂಬೈ, ಆ. 19: ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ನೆರೆಯಿಂದಾಗಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಮಹಾರಾಷ್ಟ್ರದ ಮುಂಬೈ ಹಾಗೂ ಘಟ್ಟ ಪ್ರದೇಶಗಳು ಸೇರಿದಂತೆ ಕೊಂಕಣದಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ರೆಡ್ ಅಲರ್ಟ್ ಘೋಷಿಸಿದ್ದು, ಆಗಸ್ಟ್ 20ರ ವರೆಗೆ ಭಾರೀ ಮಳೆ ಬೀಳಬಹುದು ಎಂದು ಮುನ್ನೆಚ್ಚರಿಕೆ ನೀಡಿದೆ. ಥಾಣೆ, ರಾಯಗಢ, ರತ್ನಗಿರಿ ಹಾಗೂ ಪಾಲ್ಘಾರ್ ಜಿಲ್ಲೆಗಳಲ್ಲಿ ಬುಧವಾರ ಬೆಳಗ್ಗಿನ ವರೆಗೆ ಈ ರೆಡ್ ಅಲರ್ಟ್ ಚಾಲ್ತಿಯಲ್ಲಿರಲಿದೆ.

ನಾಂದೇಡ್ ಜಿಲ್ಲೆಯಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. 6 ಮಂದಿ ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ನೆರೆಯಲ್ಲಿ ಸಿಲುಕಿದ್ದ 293 ಮಂದಿಯನ್ನು ರಕ್ಷಣಾ ತಂಡಗಳು ರಕ್ಷಿಸಿವೆ. ರಕ್ಷಣಾ ಕಾರ್ಯಾಚರಣೆಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್)ಯನ್ನು ರವಿವಾರ ಮಧ್ಯರಾತ್ರಿ ಮುಖೇಡ್ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೀಡ್‌ನಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ನೆರೆಯಲ್ಲಿ ಸಿಲುಕಿಕೊಂಡ ಮೂವರನ್ನು ರಕ್ಷಿಸಲಾಗಿದೆ. ಅಕೋಲಾದಲ್ಲಿ ಗೋಡೆ ಕುಸಿದು ಇನ್ನೋರ್ವ ಮೃತಪಟ್ಟಿದ್ದಾನೆ. ದಕ್ಷಿಣ ಮುಂಬೈಯ ಮಲಬಾರ್ ಹಿಲ್‌ನ ನೆಪೀನ್ ಸೀ ರಸ್ತೆ ಪ್ರದೇಶದಲ್ಲಿರುವ ಸಿಮ್ಲಾ ಹೌಸ್‌ನಲ್ಲಿ ಗೋಡೆ ಕುಸಿದು ಮತ್ತೋರ್ವ ಮೃತಪಟ್ಟಿದ್ದಾನೆ. ಮೃತಪಟ್ಟ ವ್ಯಕ್ತಿಯನ್ನು ಸತೀಶ್ ತಿರ್ಕೆ ಎಂದು ಗುರುತಿಸಲಾಗಿದೆ.

ಬಾಂದ್ರಾದ ಕನಕಿಯಾ ಪ್ಯಾಲೇಸ್ ಕಟ್ಟಡದ ಸಮೀಪದ ಬಿಕೆಸಿ ಸೇತುವೆಯಿಂದ ಮಿಠೀ ನದಿಗೆ ಬಿದ್ದು ಯುವಕನೋರ್ವ ನಾಪತ್ತೆಯಾಗಿದ್ದಾನೆ. ಆತನನ್ನು ವರ್ದನ್ ಜಂಜೋತರ್ (24) ಎಂದು ಗುರುತಿಸಲಾಗಿದೆ. ಆತನಿಗಾಗಿ ಅಗ್ನಿ ಶಾಮಕ ದಳ ಸೋಮವಾರ ರಾತ್ರಿ ವರೆಗೆ ಶೋಧ ಕಾರ್ಯಾಚರಣೆ ನಡೆಸಿತು ಎಂದು ಅವರು ಹೇಳಿದ್ದಾರೆ.

ರಕ್ಷಣಾ ತಂಡ 300ಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ ಎಂದು ರಾಜ್ಯ ಸರಕಾರದ ವಿಪತ್ತು ನಿರ್ವಹಣೆಯ ನಿಯಂತ್ರಣ ಕೊಠಡಿ ಹಾಗೂ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ ಮಳೆಯಿಂದಾಗಿ ರಾಜ್ಯದಲ್ಲಿ ಅಂದಾಜು ಸುಮಾರು 4.5 ಲಕ್ಷ ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ. ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ 6ರಿಂದ 7 ಗ್ರಾಮಗಳು ನೆರೆ ಸಂತ್ರಸ್ತವಾಗಿವೆ. ಕೇಂದ್ರ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಅನ್ನು ಬೀಡ್ ಜಿಲ್ಲೆಯ ಪರ್ಲಿ ತಾಲೂಕಿನ ಕೌಡ್‌ಗಾಂವ್‌ಗೆ ಸೋಮವಾರ ರವಾನಿಸಲಾಗಿದೆ.

ಮುಂಬೈ, ಥಾಣೆ, ರಾಯ್‌ಗಢ, ಕೊಂಕಣ್, ಪಶ್ಚಿಮ ಮಹಾರಾಷ್ಟ್ರ, ವಿದರ್ಭ ಹಾಗೂ ಮರಾಠಾವಾಡದಲ್ಲಿ ರವಿವಾರ ರಾತ್ರಿಯಿಂದ ಮಳೆ ಸುರಿಯುತ್ತಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರು ಸೋಮವಾರ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಲ್ಲದೆ, ಜಾಗೃತರಾಗಿರುವಂತೆ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆಗಳಿಗೆ ಆದೇಶ ನೀಡಿದ್ದಾರೆ.

ತಗ್ಗು ಪ್ರದೇಶಗಳ ಹಲವು ರಸ್ತೆಗಳು ಜಲಾವೃತವಾದ ಹಿನ್ನೆಲೆಯಲ್ಲಿ ಮುಂಬೈ ಹಲವು ಭಾಗಗಳಲ್ಲಿ ಸೋಮವಾರ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಹಳಿಗಳು ಜಲಾವೃತವಾದುದರಿಂದ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (ಸಿಎಸ್‌ಎಂಟಿ) ಹಾಗೂ ಕುರ್ಲಾ ಸ್ಟೇಷನ್ ನಡುವಿನ ಹಾರ್ಬರ್ ಲೈನ್‌ನಲ್ಲಿ ಲೋಕಲ್ ರೈಲುಗಳ ಸೇವೆಯನ್ನು ಮಂಗಳವಾರ ರದ್ದುಗೊಳಿಸಲಾಗಿದೆ. ಚುನಾಭಟ್ಟಿ ನಿಲ್ದಾಣದಲ್ಲಿ ಹಳಿಗಳು ಜಲಾವೃತವಾದುದರಿಂದ ರೈಲು ಸಂಚಾರವನ್ನು ಸಂಪೂರ್ಣವಾಗಿ ನಿಂತಿದೆ.

ಈ ನಡುವೆ ಮುಂಬೈಯ ಮೈಸೂರು ಕಾಲನಿ ಹಾಗೂ ಭಕ್ತಿ ಪಾರ್ಕ್ ನಿಲ್ದಾಣದ ನಡುವೆ ಸಂಚರಿಸುತ್ತಿದ್ದ ಮೋನೋ ರೈಲೊಂದು ಮಂಗಳವಾರ ಇದ್ದಕ್ಕಿದ್ದಂತೆ ನಿಂತಿದೆ. ಅಗ್ನಿಶಾಮಕ ದಳ ಹಾಗೂ ಇತರ ಸಂಸ್ಥೆಗಳು ಕ್ರೇನ್‌ಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೆರೆ ಹಾಗೂ ಸಂಚಾರ ಅಡ್ಡಿಯ ಹಿನ್ನೆಲೆಯಲ್ಲಿ ವಿಮಾನ ಸಂಚಾರದ ವೇಳಾ ಪಟ್ಟಿಯನ್ನು ಪರಿಶೀಲಿಸುವಂತೆ ಹಾಗೂ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಇಂಡಿಗೊ ಹಾಗೂ ಆಕಾಸ ವಿಮಾನ ಯಾನ ಸಂಸ್ಥೆ ಪ್ರಯಾಣಿಕರನ್ನು ಆಗ್ರಹಿಸಿದೆ. ಎರಡೂ ವಿಮಾನ ಯಾನ ಸಂಸ್ಥೆಗಳು ತಮ್ಮ ‘ಎಕ್ಸ್’ನ ಹ್ಯಾಂಡಲ್‌ನಲ್ಲಿ ಮಾಹಿತಿಯ ಪೋಸ್ಟ್‌ಗಳನ್ನು ಹಾಕಿವೆ.

ಹವಾಮಾನ ಇಲಾಖೆ ಭಾರೀ ಮಳೆ ಸುರಿಯುವ ಬಗ್ಗೆ ಮುನ್ನೆಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮುಂಬೈ, ಥಾಣೆ ಹಾಗೂ ನವಿ ಮುಂಬೈಯಲ್ಲಿ ಶಾಲೆ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News