ಪತ್ನಿಯನ್ನು ಕೊಲೆಗೈದು ದೇಹದ ಭಾಗಗಳನ್ನು ಕುಕ್ಕರ್ ನಲ್ಲಿ ಬೇಯಿಸಿ ನದಿಗೆ ಎಸೆದ ಮಾಜಿ ಸೈನಿಕ
Photo credit: NDTV
ತೆಲಂಗಾಣ : ಹೈದರಾಬಾದ್ ನಲ್ಲಿ ಮಾಜಿ ಸೈನಿಕನೋರ್ವ ತನ್ನ ಪತ್ನಿಯನ್ನು ಕೊಲೆಗೈದು ಆಕೆಯ ದೇಹವನ್ನು ತುಂಡರಿಸಿ, ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ ಕೆರೆಗೆ ಎಸೆದಿರುವ ಆಘಾತಕಾರಿ ಘಟನೆ ನಡೆದಿದ್ದು, ಇದೀಗ ಆರೋಪಿ ಕೃತ್ಯವನ್ನು ಒಪ್ಪಿಕೊಂಡರೂ, ಪೊಲೀಸರು ಸಾಕ್ಷಿ ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದಾರೆ.
ವೆಂಕಟ್ ಮಾಧವಿ(35) ಕೊಲೆಯಾದ ಮಹಿಳೆ. ವೆಂಕಟ್ ಮಾಧವಿ ನಾಪತ್ತೆ ಬಗ್ಗೆ ಆಕೆಯ ಕುಟುಂಬಸ್ಥರು ಜ.18ರಂದು ಮೀರ್ ಪೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ವೆಂಕಟ್ ಮಾಧವಿ ನಾಪತ್ತೆ ಬಗ್ಗೆ ಪತಿ ಗುರುಮೂರ್ತಿಯನ್ನು ಪ್ರಶ್ನಿಸಿದಾಗ ಸಂಬಂಧಿಕರ ಮನೆಗೆ ತೆರಳುವುದಾಗಿ ಜಗಳ ಮಾಡಿ ಮನೆಯಿಂದ ಹೋಗಿದ್ದಾಳೆ ಎಂದು ಹೇಳಿದ್ದಾನೆ. ಆದರೆ ಈ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ ಘೋರವಾದ ಕೃತ್ಯವೊಂದು ನಡೆದಿರುವುದು ಬಯಲಾಗಿದೆ.
ಗುರುಮೂರ್ತಿ ಪ್ರಕಾಶಂ ಜಿಲ್ಲೆಯ ನಿವಾಸಿಯಾಗಿದ್ದು, ಈ ಮೊದಲು ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದ್ದ. ಪತ್ನಿ ಮಾಧವಿ ಮತ್ತು ತಮ್ಮ ಇಬ್ಬರು ಮಕ್ಕಳೊಂದಿಗೆ ಹೈದರಾಬಾದ್ ನ ಜಿಲ್ಲೆಲಗುಡಾದಲ್ಲಿ ವಾಸಿಸುತ್ತಿದ್ದ. ಜನವರಿ 15ರಂದು ನಂದ್ಯಾಲ್ ನಲ್ಲಿರುವ ತನ್ನ ಹುಟ್ಟೂರಿಗೆ ಹೋಗುವ ಎಂದು ಮಾಧವಿ ಗುರುಮೂರ್ತಿಯನ್ನು ಒತ್ತಾಯಿಸಿದ್ದಾಳೆ. ಇದಕ್ಕೆ ಕೋಪಗೊಂಡ ಗುರುಮೂರ್ತಿ ಮಾಧವಿಯನ್ನು ಕೊಲೆ ಮಾಡಿ ದೇಹದ ಭಾಗಗಳನ್ನು ಕತ್ತರಿಸಿ, ಗೋಣಿ ಚೀಲದಲ್ಲಿ ಪ್ಯಾಕ್ ಮಾಡಿ ಅದನ್ನು ಜಿಲ್ಲೆಲಗುಡಾ ಬಳಿಯ ಚಂದನ್ ಸರೋವರಕ್ಕೆ ಎಸೆದಿದ್ದಾನೆ.
ಎಲುಬುಗಳನ್ನು ಪುಡಿಮಾಡಿ ಸಾಕ್ಷಿ ನಾಶ!
ಮಾಧವಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಪತಿ ಗುರುಮೂರ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಕೃತ್ಯ ಎಸಗಿರುವುದು ಬಯಲಾಗಿದೆ. ಗುರುಮೂರ್ತಿ ಪತ್ನಿಯನ್ನು ಕೊಲೆಗೈದು ಬಾತ್ ರೂಂನಲ್ಲಿ ಆಕೆಯ ದೇಹವನ್ನು ತುಂಡರಿಸಿ ದೇಹದ ಭಾಗಗಳನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದ್ದಾನೆ, ಎಲುಬುಗಳನ್ನು ಪುಡಿಮಾಡಿ ಮೂರು ದಿನಗಳ ಅವಧಿಯಲ್ಲಿ ಅವಶೇಷಗಳನ್ನು ಚೀಲದಲ್ಲಿ ತುಂಬಿ ಸಮೀಪದ ಕೆರೆಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಕ್ಷಿ ಸಿಗುವವರೆಗೂ ʼನಾಪತ್ತೆʼ ಎಂದು ಪರಿಗಣಿಸಲಿರುವ ಪೊಲೀಸರು!
ಮೀರ್ ಪೇಟ್ ಕೆರೆಯಲ್ಲಿ ಮಹಿಳೆಯ ಅವಶೇಷಗಳಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಈವರೆಗೆ ಯಾವುದೇ ನಿರ್ಣಾಯಕ ಪುರಾವೆಗಳು ಪತ್ತೆಯಾಗಿಲ್ಲ. ಕೊಲೆಗೆ ಸಾಕ್ಷಿ ಸಿಗುವವರೆಗೂ ʼನಾಪತ್ತೆಯಾದ ಮಹಿಳೆʼ ಎಂದು ಪರಿಗಣಿಸಲಾಗುವುದು ಎಂದು ಮೀರಪೇಟೆ ಎಸ್ ಎಚ್ ಒ ಕೆ ನಾಗರಾಜು ಹೇಳಿದ್ದಾರೆ.