×
Ad

ಮುಂಬೈ | ವೈದ್ಯ ಸ್ನೇಹಿತೆಯ ವಿಡಿಯೊ ಕಾಲ್ ಮಾರ್ಗದರ್ಶನದ ಮೂಲಕ ಮಹಿಳೆಯ ಹೆರಿಗೆಗೆ ನೆರವು ನೀಡಿದ ಸಹ ಪ್ರಯಾಣಿಕ!

ನಿಜ ಜೀವನದ 'ರಾಂಚೊ' ಎಂದು ಶ್ಲಾಘಿಸಿದ ಜನರು

Update: 2025-10-16 22:20 IST

Screengrab : X \ @Siddharth_00001

ಮುಂಬೈ: ವೈದ್ಯ ಸ್ನೇಹಿತೆಯ ವಿಡಿಯೊ ಕರೆ ಮಾರ್ಗದರ್ಶನದ ಮೂಲಕ, ಪ್ರಯಾಣಿಕರೊಬ್ಬರು ಮಹಿಳೆಯೊಬ್ಬರು ಹೆರಿಗೆಗೆ ನೆರವಾಗಿರುವ ಘಟನೆ ಬುಧವಾರ ಮುಂಜಾನೆ ಮುಂಬೈನ ರಾಮ್ ಮಂದಿರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಲೋಕಲ್ ಟ್ರೈನ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ರಾಮ್ ಮಂದಿರ್ ರೈಲ್ವೆ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ ಪ್ರಸವ ವೇದನೆ ಕಾಣಿಸಿಕೊಂಡಿದೆ. ಈ ವೇಳೆ, ವಿಕಾಸ್ ದಿಲೀಪ್ ಬೆದ್ರೆ ಎಂದು ಗುರುತಿಸಲಾಗಿರುವ ಸಹ ಪ್ರಯಾಣಿಕರೊಬ್ಬರು ಯಾವುದೇ ವೈದ್ಯಕೀಯ ಸಿಬ್ಬಂದಿ ಅಥವಾ ಆ್ಯಂಬುಲೆನ್ಸ್ ಲಭ್ಯವಿಲ್ಲದಿದ್ದರೂ ಮಹಿಳೆಯ ನೆರವಿಗೆ ಧಾವಿಸಿದ್ದಾರೆ.

ರಾತ್ರಿ ಸುಮಾರು 12.40ಕ್ಕೆ ಗೊರೇಗಾಂವ್ ನಲ್ಲಿ ರೈಲು ಹತ್ತಿರುವ ಬೆದ್ರೆ, ಮಹಿಳೆಯೊಬ್ಬರು ನರಳಾಡುತ್ತಿರುವುದನ್ನು ಗಮನಿಸಿ, ತಕ್ಷಣವೇ ರೈಲಿನ ತುರ್ತು ಸರಪಣಿಯನ್ನು ಎಳೆದಿದ್ದಾರೆ. ಬಳಿಕ, ರೈಲು ಮುಂದಿನ ನಿಲ್ದಾಣದಲ್ಲಿ ನಿಂತಿದೆ.

ಸಮೀಪದಲ್ಲಿ ಯಾವುದೇ ವೈದ್ಯಕೀಯ ನೆರವು ಇಲ್ಲದಿರುವುದನ್ನು ಗಮನಿಸಿದ ಬೆದ್ರೆ, ತಮ್ಮ ವೈದ್ಯ ಸ್ನೇಹಿತೆಗೆ ಕರೆ ಮಾಡಿ, ತುರ್ತು ಸ್ಥಿತಿಯನ್ನು ವಿವರಿಸಿದ್ದಾರೆ. ಆಗ ತನ್ನ ವೈದ್ಯ ಸ್ನೇಹಿತೆ ಹಂತಹಂತವಾಗಿ ನೀಡಿದ ಮಾರ್ಗದರ್ಶನವನ್ನು ಅನುಸರಿಸಿ, ಮಹಿಳೆಯು ತನ್ನ ಮಗುವಿಗೆ ರೈಲ್ವೆ ಅಂಕಣದಲ್ಲಿಯೇ ಜನ್ಮ ನೀಡಲು ನೆರವಾಗಿದ್ದಾರೆ.

ಸದ್ಯ ತಾಯಿ ಹಾಗೂ ಮಗುವಿನ ಆರೋಗ್ಯ ಸ್ಥಿರವಾಗಿದೆ. ವರದಿಗಳ ಪ್ರಕಾರ, ಮಹಿಳೆಯ ಕುಟುಂಬದ ಸದಸ್ಯರು ಇದಕ್ಕೂ ಮುನ್ನ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ, ಆಕೆಯನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಯ ಸಿಬ್ಬಂದಿ ನಿರಾಕರಿಸಿದ್ದಾರೆ. ಹೀಗಾಗಿ, ಅವರು ಅನಿವಾರ್ಯವಾಗಿ ರೈಲಿನಲ್ಲಿ ಮರಳುತ್ತಿದ್ದರು ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಬೆದ್ರೆಯ ವೀರೋಚಿತ ಪ್ರಯತ್ನವನ್ನು ಶ್ಲಾೆಘಿಸಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು, ಅವರನ್ನು ರಾಂಚೊಗೆ ಹೋಲಿಸಿದ್ದಾರೆ. ‘ತ್ರೀ ಈಡಿಯಟ್ಸ್’ ಚಿತ್ರದಲ್ಲೂ ಕೂಡಾ ಅಮೀರ್ ಖಾನ್ ವಿಡಿಯೊ ಕರೆ ಮೂಲಕ ತನ್ನ ವೈದ್ಯ ಸ್ನೇಹಿತೆಯಿಂದ ಸೂಚನೆಗಳನ್ನು ಸ್ವೀಕರಿಸಿ, ಪ್ರಸವ ವೇದನೆಗೀಡಾದ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸುವ ಸನ್ನಿವೇಶವಿದೆ.

ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, “ಆತ ನಿಜ ಜೀವನದ ರಾಂಚೊ ಆಗಿದ್ದಾರೆ. ಇದು ರಾತ್ರಿ ಒಂದು ಗಂಟೆಯಲ್ಲೂ ಯಾರಾದರೊಬ್ಬರು ನೆರವಿಗೆ ಬರುವ ನಮ್ಮ ಮುಂಬೈ ಆಗಿದೆ ಹಾಗೂ ಈ ಮುಂಬೈ ಹಾಗೂ ಮುಂಬೈ ವಾಸಿಗಳು ರಾಜಕೀಯವನ್ನು ಮೀರಿದ್ದಾರೆ” ಎಂದು ಶ್ಲಾಘಿಸಿದ್ದಾರೆ.

“ಈತ ತ್ರೀ ಈಡಿಯಟ್ಸ್ ಚಿತ್ರದ ನಿಜ ಚಂಚೋರ್ ದಾಸ್ ಚಂಚಡ್ ಆಗಿದ್ದಾರೆ” ಎಂದು ಮತ್ತೊಬ್ಬ ಬಳಕೆದಾರರು ಪ್ರಶಂಸಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News