ಮಧ್ಯಪ್ರದೇಶ | ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಹಾಡಹಗಲೇ ನರ್ಸಿಂಗ್ ವಿದ್ಯಾರ್ಥಿನಿಯ ಕತ್ತು ಸೀಳಿ ಕೊಲೆ
ಸಂಧ್ಯಾ ಚೌಧರಿ (Photo credit: NDTV)
ಭೋಪಾಲ್ : ಮಧ್ಯಪ್ರದೇಶದ ನರಸಿಂಗ್‌ಪುರದ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹಾಡಹಗಲೇ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳನ್ನು ಆಕೆಯ ಪ್ರಿಯಕರ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಜೂನ್ 27ರಂದು ಘಟನೆ ನಡೆದಿದೆ. ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ವೇಳೆ ಪಕ್ಕದಲ್ಲೇ ಇದ್ದ ವ್ಯಕ್ತಿಯೋರ್ವರು ಮೊಬೈಲ್ ಫೋನ್‌ನಲ್ಲಿ ಘಟನೆಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಕೊಲೆಯಾದ ವಿದ್ಯಾರ್ಥಿನಿಯನ್ನು ಸಂಧ್ಯಾ ಚೌಧರಿ ಎಂದು ಗುರುತಿಸಲಾಗಿದೆ. ಅಭಿಷೇಕ್ ಕೋಶ್ಟಿ ಕೊಲೆ ಮಾಡಿದ ಆರೋಪಿ. ಸಂಧ್ಯಾ ಚೌಧರಿ ಮತ್ತು ಅಭಿಷೇಕ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಸಂಬಂಧದಲ್ಲಿ ಬಿರುಕು ಮೂಡಿತ್ತು ಎಂದು ಹೇಳಲಾಗಿದೆ.
ವೈರಲ್ ವೀಡಿಯೊದಲ್ಲಿ ಕಪ್ಪು ಶರ್ಟ್ ಧರಿಸಿದ್ದ ಅಭಿಷೇಕ್ ಕೋಶ್ಟಿ, ಸಂದ್ಯಾಳನ್ನು ಹೊಡೆದು ನೆಲಕ್ಕೆ ಬೀಳಿಸಿ ಆಕೆಯ ಎದೆಯಲ್ಲಿ ಕುಳಿತು ಕತ್ತು ಸೀಳಿ ಕೊಲೆಗೈಯ್ಯುವುದು ಕಂಡು ಬಂದಿದೆ. ಸಂಧ್ಯಾಳನ್ನು ಕೊಲೆಗೈದ ಬಳಿಕ ಅಭಿಷೇಕ್ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಸರಿಸುಮಾರು 10 ನಿಮಿಷ ಸಂಧ್ಯಾ ಮೇಲೆ ಅಭಿಷೇಕ್ ದಾಳಿ ಮಾಡಿದ್ದಾನೆ. ಈ ವೇಳೆ 10 ಮೀಟರ್ ದೂರದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳಿದ್ದರು. ಒಳಗೆ, ವೈದ್ಯರು, ದಾದಿಯರು ಮತ್ತು ವಾರ್ಡ್ ಬಾಯ್‌ಗಳು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳಿದ್ದರು. ಆದರೆ ಯಾರೂ ಕೂಡ ದಾಳಿಕೋರನನ್ನು ತಡೆಯಲಿಲ್ಲ.
ಘಟನೆಯ ಬಳಿಕ ಆಸ್ಪತ್ರೆಯ ಭದ್ರತೆಯಲ್ಲಿನ ಸಂಪೂರ್ಣ ವೈಫಲ್ಯವು ರೋಗಿಗಳು ಮತ್ತು ಅವರ ಕುಟುಂಬಸ್ಥರಲ್ಲಿ ಭಯ ಮೂಡಿಸಿತ್ತು. ಇದರಿಂದ ತುರ್ತು ಘಟಕದಲ್ಲಿ ದಾಖಲಾಗಿದ್ದ 11 ರೋಗಿಗಳಲ್ಲಿ 8 ಮಂದಿ ಅದೇ ದಿನ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದರೆ, ಇನ್ನುಳಿದವರು ಮರುದಿನ ತೆರಳಿದರು ಎಂದು NDTV ವರದಿ ತಿಳಿಸಿದೆ.