×
Ad

ಮಣಿಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 2 ತೆರವುಗೊಳಿಸಲು ಕುಕಿ-ರೊ ಒಪ್ಪಿಗೆ

ಕೇಂದ್ರ ಸರಕಾರದೊಂದಿಗೆ ಒಪ್ಪಂದ

Update: 2025-09-04 20:21 IST

PC :  PTI 

ಹೊಸದಿಲ್ಲಿ, ಸೆ. 4: ಮಣಿಪುರದ ಉದ್ವಿಗ್ನತೆಯನ್ನು ಶಮನ ಮಾಡುವ ನಿಟ್ಟಿನಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ, ಪ್ರಯಾಣಿಕರು ಮತ್ತು ಅಗತ್ಯ ವಸ್ತುಗಳ ಮುಕ್ತ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ- 02ನ್ನು ಮುಕ್ತಗೊಳಿಸಲು ಕುಕಿ-ರೊ ಕೌನ್ಸಿಲ್ ಒಪ್ಪಿಕೊಂಡಿದೆ. ಈ ವಿಷಯವನ್ನು ಕೇಂದ್ರ ಗೃಹ ಸಚಿವಾಲಯ ಗುರುವಾರ ಪ್ರಕಟಿಸಿದೆ.

ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಮತ್ತು ಕುಕಿ-ರೊ ಕೌನ್ಸಿಲ್‌ ನ ನಿಯೋಗದ ಸದಸ್ಯರ ನಡುವೆ ಹೊಸದಿಲ್ಲಿಯಲ್ಲಿ ಕಳೆದ ಕೆಲವು ದಿನಗಳಲ್ಲಿ ನಡೆದ ಸರಣಿ ಸಭೆಗಳ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದ ಜೀವವಾಹಿನಿಯಾಗಿರುವ ಈ ಮಹತ್ವದ ಹೆದ್ದಾರಿಯಲ್ಲಿ ಶಾಂತಿ ಕಾಪಾಡಲು ಕೇಂದ್ರ ಸರಕಾರವು ನಿಯೋಜಿಸುವ ಭದ್ರತಾ ಪಡೆಗಳಿಗೆ ಪೂರ್ಣ ಸಹಕಾರವನ್ನು ನೀಡುವುದಾಗಿಯೂ ಕೌನ್ಸಿಲ್ ಭರವಸೆ ನೀಡಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

‘‘ರಾಷ್ಟ್ರೀಯ ಹೆದ್ದಾರಿ- 2ರಲ್ಲಿ ಶಾಂತಿ ಕಾಪಾಡಿಕೊಳ್ಳಲು ಭಾರತ ಸರಕಾರ ನಿಯೋಜಿಸುವ ಭದ್ರತಾ ಪಡೆಗಳಿಗೆ ಸಹಕಾರ ನೀಡುವ ಬದ್ಧತೆಯನ್ನು ಕುಕಿ-ರೊ ಕೌನ್ಸಿಲ್ ನೀಡಿದೆ’’ ಎಂದು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ರಾಷ್ಟ್ರೀಯ ಹೆದ್ದಾರಿ 2 ಮಣಿಪುರವನ್ನು ನಾಗಾಲ್ಯಾಂಡ್ ಮತ್ತು ಈಶಾನ್ಯದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತಿದ್ದು, ಈ ವಲಯದ ಪ್ರಮುಖ ಜೀವವಾಹಿನಿಯಾಗಿದೆ. ಮಣಿಪುರದಲ್ಲಿ 2023 ಮೇ ತಿಂಗಳಲ್ಲಿ ಬಹುಸಂಖ್ಯಾತ ಮೇತೈ ಮತ್ತು ಅಲ್ಪಸಂಖ್ಯಾತ ಕುಕಿ-ರೊ ಸಮುದಾಯಗಳ ನಡುವೆ ಜನಾಂಗೀಯ ಸಂಘರ್ಷ ಸ್ಫೋಟಿಸಿದ ಬಳಿಕ ಈ ಹೆದ್ದಾರಿ ಬಂದ್ ಆಗಿದೆ. ಸಂಘರ್ಷದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಮನೆಗಳು ಬೆಂಕಿಗೆ ಆಹುತಿಯಾಗಿವೆ ಹಾಗೂ ಸಾವಿರಾರು ಮಂದಿ ನಿರ್ವಸಿತರಾಗಿದ್ದಾರೆ.

ಬಂಡುಕೋರ ನಿಗ್ರಹ ಕಾರ್ಯಾಚರಣೆ ಸ್ಥಗಿತಕ್ಕೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ

ಪ್ರಧಾನಿ ನರೇಂದ್ರ ಮೋದಿಯವರ ನಿಗದಿತ ಮಣಿಪುರ ಭೇಟಿಗೆ ಮುನ್ನ, ಕುಕಿ-ರೊ ಬಂಡುಕೋರ ಗುಂಪುಗಳ ವಿರುದ್ಧದ ಕಾರ್ಯಾಚರಣೆ ಸ್ಥಗಿತ ಒಪ್ಪಂದವನ್ನು ನವೀಕರಿಸುವ ತ್ರಿಪಕ್ಷೀಯ ಒಪ್ಪಂದಕ್ಕೆ ಕೇಂದ್ರ ಸರಕಾರ ಸಹಿ ಹಾಕಿದೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು ಎಂದು ಕುಕಿ ನ್ಯಾಶನಲ್ ಆರ್ಗನೈಸೇಶನ್ (ಕೆಎನ್‌ಒ) ವಕ್ತಾರ ಡಾ. ಸೇಲನ್ ಹಾವೊಕಿಪ್ ಹೇಳಿದರು. ಈ ಒಪ್ಪಂದಕ್ಕೆ ಪ್ರತಿಯಾಗಿ, ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ತಡೆಯನ್ನು ತೆರವುಗೊಳಿಸಲು ಮತ್ತು ಕುಕಿ-ರೊ ಪ್ರದೇಶಗಳಲ್ಲಿ ಮೆತೈ ಜನರ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವ ಭರವಸೆಯನ್ನು ಕುಕಿ-ರೊ ಬಂಡುಕೋರ ಗುಂಪುಗಳು ನೀಡಿವೆ.

ಕೇಂದ್ರ ಗೃಹ ಸಚಿವಾಲಯ, ಮಣಿಪುರ ಸರಕಾರ ಹಾಗೂ ಕುಕಿ ಸಮುದಾಯದ ಸಂಘಟನೆಗಳಾದ ‘ಕುಕಿ ರಾಷ್ಟ್ರೀಯ ಸಂಘಟನೆ’ ಮತ್ತು ಯುನೈಟೆಡ್ ಪೀಪಲ್ಸ್ ಫ್ರಂಟ್‌ನ ಪ್ರತಿನಿಧಿಗಳ ನಡುವೆ ನಡೆದ ಸಭೆಯ ಬಳಿಕ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News