ಛತ್ತೀಸ್ ಗಡ | 27 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದವರು ಸೇರಿದಂತೆ 37 ನಕ್ಸಲರ ಶರಣಾಗತಿ
Image: ANI
ದಂತೇವಾಡಾ,ನ.30: ತಮ್ಮ ತಲೆಯ ಮೇಲೆ ಒಟ್ಟು 65 ಲಕ್ಷ ರೂ.ಗಳ ಬಹುಮಾನವನ್ನು ಹೊತ್ತಿದ್ದ 27 ಜನರು ಸೇರಿದಂತೆ 37 ನಕ್ಸಲರು ರವಿವಾರ ಛತ್ತೀಸ್ ಗಡದ ದಂತೇವಾಡಾ ಜಿಲ್ಲೆಯಲ್ಲಿ ಶರಣಾಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
ರಾಜ್ಯ ಸರಕಾರವು ನಕ್ಸಲರ ಶರಣಾಗತಿ ಮತ್ತು ಅವರ ಪುನರ್ವಸತಿಗಾಗಿ ರೂಪಿಸಿರುವ ‘ಪೂನಾ ಮಾರ್ಗೆಮ್’ ಉಪಕ್ರಮದ ಭಾಗವಾಗಿ 12 ಮಹಿಳೆಯರು ಸೇರಿದಂತೆ 37 ನಕ್ಸಲರು ಹಿರಿಯ ಪೋಲಿಸ್ ಮತ್ತು CRPF ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ದಂತೇವಾಡಾ ಎಸ್ಪಿ ಗೌರವ್ ರಾಯ್ ತಿಳಿಸಿದರು.
ಶರಣಾಗತರಾದ ನಕ್ಸಲರಲ್ಲಿ ಕುಮಾಲಿ ಅಲಿಯಾಸ್ ಅನಿತಾ ಮಾಂಡವಿ, ಗೀತಾ ಅಲಿಯಾಸ್ ಲಕ್ಷ್ಮಿಮಡ್ಕಮ್, ರಂಜನ್ ಅಲಿಯಾಸ್ ಸೋಮಾ ಮಾಂಡವಿ ಮತ್ತು ಭೀಮಾ ಅಲಿಯಾಸ್ ಜಹಾಜ್ ಕಲ್ಮು ಪ್ರಮುಖರಾಗಿದ್ದು, ತಮ್ಮ ತಲೆಯ ಮೇಲೆ ತಲಾ ಎಂಟು ಲಕ್ಷ ರೂ.ಗಳ ಬಹುಮಾನವನ್ನು ಹೊತ್ತಿದ್ದರು ಎಂದು ರೈ ತಿಳಿಸಿದರು.
ಸರಕಾರದ ಪುನರ್ವಸತಿ ನೀತಿಯಡಿ ಶರಣಾಗಿರುವ ನಕ್ಸಲರಿಗೆ ತಲಾ 50,000 ರೂ.ಗಳ ತಕ್ಷಣದ ನೆರವು ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ,ಕೃಷಿ ಭೂಮಿ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಶರಣಾಗತಿ ಮತ್ತು ಪುನರ್ವಸತಿ ನೀತಿಗಳಿಂದ ಪ್ರೇರಿತರಾಗಿ ಕಳೆದ 20 ತಿಂಗಳುಗಳಲ್ಲಿ ದಂತೇವಾಡಾ ಜಿಲ್ಲೆಯಲ್ಲಿ 508ಕ್ಕೂ ಅಧಿಕ ಮಾವೋವಾದಿಗಳು ಹಿಂಸಾಚಾರವನ್ನು ತೊರೆದು ಸಮಾಜದ ಮುಖ್ಯವಾಹಿನಿಗೆ ಸೇರಿದ್ದಾರೆ ಎಂದೂ ರಾಯ್ ತಿಳಿಸಿದರು.
ಪೋಲಿಸರ ಪ್ರಕಾರ ಕಳೆದ 23 ತಿಂಗಳುಗಳಲ್ಲಿ ಛತ್ತೀಸ್ ಗಡದಲ್ಲಿ ಹಿರಿಯ ನಾಯಕರು ಸೇರಿದಂತೆ 2,200ಕ್ಕೂ ಅಧಿಕ ನಕ್ಸಲರು ಶರಣಾಗಿದ್ದಾರೆ.