×
Ad

ಕೇರಳ | ಶಾಸಕ ಕೆ.ಪಿ.ಮೋಹನನ್ ಮೇಲೆ ಹಲ್ಲೆ : 10 ಮಂದಿ ವಿರುದ್ಧ ಪ್ರಕರಣ ದಾಖಲು

Update: 2025-10-03 21:32 IST

ಕೆ.ಪಿ.ಮೋಹನನ್ | Photo : X

ಕಣ್ಣೂರು, ಅ. 3: ಮಾಜಿ ಸಚಿವ ಹಾಗೂ ಕೂತುಪರಂಬ ಶಾಸಕ ಕೆ.ಪಿ. ಮೋಹನನ್‌ಗೆ ಉತ್ತರ ಕೇರಳ ಜಿಲ್ಲೆಯ ಕರಿಯಾಡ್‌ನಲ್ಲಿ ಹಲ್ಲೆ ನಡೆಸಿದ ಆರೋಪದಲ್ಲಿ 10 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಲ್‌ಡಿಎಫ್ ಶಾಸಕ ಮೋಹನನ್ ಅಂಗನವಾಡಿ ಉದ್ಘಾಟನೆಗೆ ಕರಿಯಾಡ್‌ನ ಪೆರಿಂಗತುರುಗೆ ಪೂರ್ವಾಹ್ನ ಸುಮಾರು 11.30ಕ್ಕೆ ತಲುಪಿದ ಸಂದರ್ಭ ಈ ಘಟನೆ ಸಂಭವಿಸಿದೆ.

ದತ್ತಿ ಸಂಸ್ಥೆಯೊಂದು ನಡೆಸುತ್ತಿರುವ ಡಯಾಲಿಸಿಸ್ ಸೆಂಟರ್ ತ್ಯಾಜ್ಯ ಎಸೆಯುತ್ತಿರುವ ವಿರುದ್ಧ ಆ ಪ್ರದೇಶದ ನಿವಾಸಿಗಳಾದ ಆರೋಪಿಗಳು ಪ್ರತಿಭಟನೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 15 ಮಂದಿ ಸೇರಿ ಶಾಸಕರನ್ನು ತಡೆದು, ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ. ಗಲಭೆಗೆ ಪ್ರಚೋದಿಸಿದ್ದಾರೆ ಎಂದು ಚೋಕ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಗುಂಪೊಂದು ಮೋಹನನ್ ಅವರ ಕಾರು ತಡೆದ ಬಳಿಕ ಅವರು ಕಾರು ಇಳಿದು ನಡೆದುಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಮೋಹನನ್ ಅವರು ಕಾರಿನಿಂದ ಇಳಿದು ಕಾರ್ಯಕ್ರಮದ ಸ್ಥಳಕ್ಕೆ ನಡೆದುಕೊಂಡು ಹೋಗುವ ಸಂದರ್ಭ ಅವರನ್ನು ಮತ್ತೆ ತಡೆದಿದ್ದು ಈ ವೇಳೆ ನೂಕು ನುಗ್ಗಲು ಸಂಭವಿಸಿದೆ.

ಈ ಗೊಂದಲದ ಹೊರತಾಗಿಯೂ ಮೋಹನನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಅಲ್ಲದೆ, ಅವರು ಲಿಖಿತ ದೂರು ನೀಡುವಂತೆ ಮೋಹನನ್ ಅವರಿಗೆ ಸೂಚಿಸಿದ್ದಾರೆ.

‘‘ಶಾಸಕರು ದೂರು ನೀಡಲು ನಿರಾಕರಿಸಿದ್ದುದರಿಂದ ನಾವೇ ದೂರು ದಾಖಲಿಸಿಕೊಂಡಿದ್ದೇವೆ. 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ಭಾಗವಾಗಿ ಮೋಹನನ್ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News