ನಾಲಾಸೋಪರ ಶಸ್ತ್ರಾಸ್ತ್ರ ವಶ ಪ್ರಕರಣ: ಯುಎಪಿಎ ಪ್ರಕರಣದಲ್ಲಿ ಸನಾತನ ಸಂಸ್ಥಾದ ವೈಭವ್ ರಾವುತ್‌ಗೆ ಜಾಮೀನು
ಸಾಂದರ್ಭಿಕ ಚಿತ್ರ
ಮುಂಬೈ: 2018ರ ನಾಲಾಸೋಪರ ಶಸ್ತ್ರಾಸ್ತ್ರ ವಶ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಆರೋಪಿಯಾಗಿರುವ ಹಿಂದು ಗೋವಂಶ ರಕ್ಷಾ ಸಮಿತಿ ಮತ್ತು ಸನಾತನ ಸಂಸ್ಥಾದ ಸದಸ್ಯ ವೈಭವ್ ರಾವುತ್‌ಗೆ ಬಾಂಬೆ ಉಚ್ಚ ನ್ಯಾಯಾಲಯವು ಇತ್ತೀಚಿಗೆ ಜಾಮೀನು ನೀಡಿದೆ.
ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾವುತ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಗೌರಿ ಗೋಡ್ಸೆ ಅವರ ಪೀಠವು ಅಂಗೀಕರಿಸಿತು.
ಯುಎಪಿಎ ನಿಬಂಧನೆಗಳಡಿ ಕನಿಷ್ಠ ಶಿಕ್ಷೆಯು ಐದು ವರ್ಷಗಳಾಗಿದ್ದು, ಅದನ್ನು ಜೀವಾವಧಿ ಶಿಕ್ಷೆಗೆ ವಿಸ್ತರಿಸಬಹುದಾಗಿದೆ. ಮೇಲ್ಮನವಿದಾರ ಈಗಾಗಲೇ ಐದು ವರ್ಷಗಳ ಜೈಲುವಾಸವನ್ನು ಅನುಭವಿಸಿದ್ದಾನೆ. ಸುಮಾರು 417 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲು ಪ್ರಾಸಿಕ್ಯೂಷನ್ ಉದ್ದೇಶಿಸಿದೆ ಮತ್ತು ಈವರೆಗೆ ಕೇವಲ ನಾಲ್ವರು ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ ಎಂದು ನ್ಯಾಯಾಲಯವು ಅ.5ರಂದು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿರುವ ಸೆ.20ರ ಆದೇಶದಲ್ಲಿ ಹೇಳಿದೆ.
ರಾವುತ್ ವಿರುದ್ಧ ಸ್ಫೋಟಕಗಳ ಕಾಯ್ದೆ,ಐಪಿಸಿ ಮತ್ತು ಯುಎಪಿಎ ಅಡಿ ಪ್ರಕರಣ ದಾಖಲಾಗಿತ್ತು. ರಾವುತ್ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಹಾಗೂ ಅದರ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ನಾಶಗೊಳಿಸಲು ಒಳಸಂಚಿನ ಭಾಗವಾಗಿದ್ದ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
ರಾವುತ್ ಸಿದ್ಧ ಕಚ್ಚಾ ಬಾಂಬ್‌ಗಳನ್ನು ಸಂಗ್ರಹಿಸಿದ್ದ ಮತ್ತು ಸನಾತನ ಸಂಸ್ಥಾದ ಪ್ರಕಾರ ಹಿಂದು ಧರ್ಮದ ಸಿದ್ದಾಂತಗಳಿಗೆ ವಿರುದ್ಧವಾದ ಸಿನಿಮಾಗಳ ಪ್ರದರ್ಶನ,ಪಾಶ್ಚಾತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪುಣೆಯಲ್ಲಿ ‘ಸನ್‌ಬರ್ನ್ ’ ಉತ್ಸವದಂತಹ ಕಾರ್ಯಕ್ರಮಗಳ ಆಯೋಜನೆಯನ್ನು ತಡೆಯಲು ಅವುಗಳನ್ನು ಬಳಸಿದ್ದ ಎಂದು ಹೇಳಲಾಗಿದೆ.
ವಿಚಾರಣಾ ನ್ಯಾಯಾಲಯವು ತನಗೆ ಜಾಮೀನು ತಿರಸ್ಕರಿಸಿದ ಬಳಿಕ ಸುದೀರ್ಘ ಸಮಯ ತನ್ನನ್ನು ಬಂಧನದಲ್ಲಿರಿಸಲಾಗಿದೆ ಮತ್ತು ವಿಚಾರಣೆಯು ಬೇಗ ಪೂರ್ಣಗೊಳ್ಳುವ ಲಕ್ಷಣಗಳಿಲ್ಲ ಎಂಬ ಕಾರಣವನ್ನು ಉಲ್ಲೇಖಿಸಿ ರಾವುತ್ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದ. ವಿಚಾರಣೆ ಬೇಗ ಮುಗಿಯುವ ಸಾಧ್ಯತೆಯಿಲ್ಲ ಎಂಬ ಕಾರಣದಿಂದ ತನ್ನ ಸಹ ಆರೋಪಿಗೆ ಸರ್ವೋಚ್ಚ ನ್ಯಾಯಾಲಯವು 2022,ಆ.11ರಂದು ಜಾಮೀನು ನೀಡಿತ್ತು ಎಂದು ಆತ ಅರ್ಜಿಯಲ್ಲಿ ತಿಳಿಸಿದ್ದ.
ಪ್ರಕರಣದ ಇತರ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿದ್ದ ಉಚ್ಚ ನ್ಯಾಯಾಲಯವು,ಸನಾತನ ಸಂಸ್ಥಾ ಯುಎಪಿಎ ಅಡಿ ನಿಷೇಧಿತವಲ್ಲ ಅಥವಾ ಭಯೋತ್ಪಾದಕ ಸಂಘಟನೆಯಲ್ಲ, ಅದು ಧರ್ಮ ಮತ್ತು ಅಧ್ಯಾತ್ಮದ ಕುರಿತು ಬೋಧಿಸುವ ಆಧ್ಯಾತ್ಮಿಕ ಸಂಸ್ಥೆಯಾಗಿದೆ ಎಂದು ಅಭಿಪ್ರಾಯಿಸಿತ್ತು.
ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳವು ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದ ಸ್ಥಳವು ತನಗೆ ಸೇರಿದ್ದಲ್ಲ ಎಂಬ ರಾವುತ್ ವಾದವನ್ನು ಉಚ್ಚ ನ್ಯಾಯಾಲಯವು ಪುರಸ್ಕರಿಸಿತು.
ನ್ಯಾಯವಾದಿ ಸನಾ ರಯೀಸ್ ಖಾನ್ ಅವರು ರಾವುತ್ ಪರ ವಾದಿಸಿದ್ದರು.