ಒಸ್ಟ್ರಾವಾ ಗೋಲ್ಡನ್ ಸ್ಪೈಕ್ ಕ್ರೀಡಾಕೂಟ | ಚಿನ್ನ ಗೆದ್ದರೂ ತನ್ನ ಪ್ರದರ್ಶನಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನೀರಜ್ ಚೋಪ್ರಾ
ನೀರಜ್ ಚೋಪ್ರಾ | PC : PTI
ಹೊಸದಿಲ್ಲಿ: ವರ್ಲ್ಡ್ ಅತ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಗೋಲ್ಡ್ ಇವೆಂಟ್ ನಲ್ಲಿ ಮಂಗಳವಾರ 85.29 ಮೀ.ದೂರಕ್ಕೆ ಜಾವೆಲಿನ್ ಎಸೆದು ಗೋಲ್ಡನ್ ಸ್ಪೈಕ್ ಪ್ರಶಸ್ತಿಯನ್ನು ಗೆದ್ದಿರುವ ನೀರಜ್ ಚೋಪ್ರಾ ತನ್ನ ಪ್ರದರ್ಶನದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಚೋಪ್ರಾ 9 ಸ್ಪರ್ಧಿಗಳಿದ್ದ ಸ್ಪರ್ಧಾಕಣದಲ್ಲಿ ಮೂರನೇ ಸುತ್ತಿನಲ್ಲಿ ನೀಡಿದ ಪ್ರದರ್ಶನದ ಆಧಾರದಲ್ಲಿ ಚಿನ್ನ ಗೆದ್ದಿದ್ದರು. ಚೋಪ್ರಾ ಅವರ ಮೊದಲ ಪ್ರಯತ್ನ ಫೌಲ್ ಆಗಿದ್ದು, ತನ್ನ 2ನೇ ಪ್ರಯತ್ನದಲ್ಲಿ 83.45 ಮೀ.ದೂರಕ್ಕೆ ಜಾವೆಲಿನ್ ಎಸೆದರು.
‘‘ಇಂದು ನನ್ನ ಪ್ರದರ್ಶನದ ಕುರಿತು ನನಗೆ ಖುಷಿಯಿಲ್ಲ. ಆದರೆ ಟ್ರೋಫಿ ಗೆದ್ದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾನು ಚಿಕ್ಕವನಿರುವಾಗಲೇ ಈ ಕ್ರೀಡಾಕೂಟವನ್ನು ನೋಡುತ್ತಿದ್ದೆ. ಜಾನ್ ಝೆಲೆಝ್ನಿ ಹಾಗೂ ಉಸೇನ್ ಬೋಲ್ಟ್ ಅವರು ಗೋಲ್ಡನ್ ಸ್ಪೈಕ್ ಗೆದ್ದಿರುವುದನ್ನು ನಾನು ವೀಕ್ಷಿಸಿದ್ದೆ. ನನಗೂ ಗೋಲ್ಡನ್ ಸ್ಪೈಕ್ ಗೆಲ್ಲಬೇಕೆಂಬ ಕನಸಿತ್ತು. ಇದೀಗ ಆ ಕನಸು ಈಡೇರಿದೆ’, ಎಂದು ಡಬಲ್ ಒಲಿಂಪಿಯನ್ ಚೋಪ್ರಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘‘ಝೆಕಿಯಾದಲ್ಲಿ ಜಾವೆಲಿನ್ ಥ್ರೋ ಬಹಳ ಜನಪ್ರಿಯವಾಗಿದೆ ಎಂದು ನನಗೆ ತಿಳಿದಿದೆ. ಜನಸಮೂಹದಿಂದ ನಮಗೆ ಸಿಗುತ್ತಿದ್ದ ಬೆಂಬಲ ಅದ್ಭುತವಾಗಿತ್ತು. ನಾನು ಅವರಿಗಾಗಿ ಇನ್ನೂ ಉತ್ತಮ ಪ್ರದರ್ಶನ ನೀಡಬಹುದಿತ್ತು’’ ಎಂದು ಮೇ ತಿಂಗಳಲ್ಲಿ ದೋಹಾ ಡೈಮಂಡ್ ಲೀಗ್ ನಲ್ಲಿ 2ನೇ ಸ್ಥಾನ ಪಡೆದಾಗ 90 ಮೀ. ಗಡಿ ದಾಟಿದ್ದ ಚೋಪ್ರಾ ಹೇಳಿದ್ದಾರೆ.
ಗೋಲ್ಡನ್ ಸ್ಪೈಕ್ ಕ್ರೀಡಾಕೂಟಕ್ಕಿಂತ ಕೆಲವೇ ದಿನಗಳ ಮೊದಲು ಪ್ಯಾರಿಸ್ ನಲ್ಲಿ ಡೈಮಂಡ್ ಲೀಗ್ ಪ್ರಶಸ್ತಿ ಜಯಿಸಿದ್ದ 27ರ ಹರೆಯದ ಅತ್ಲೀಟ್ ಚೋಪ್ರಾ ಈವರ್ಷ ತನ್ನ ಶ್ರೇಷ್ಠ ಫಾರ್ಮ್ ಕಾಯ್ದುಕೊಂಡಿದ್ದಾರೆ. ಚೋಪ್ರಾ ಬೆಂಗಳೂರಿನಲ್ಲಿ ಜುಲೈ 5ರಿಂದ ಆರಂಭವಾಗಲಿರುವ ಎನ್‌ಸಿ ಕ್ಲಾಸಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಈ ಕ್ರೀಡಾಕೂಟದಲ್ಲಿ ಆ್ಯಂಡರ್ಸನ್ ಪೀಟರ್ಸ್ ಹಾಗೂ ಥಾಮಸ್ ರೋಹ್ಲರ್‌ರನ್ನು ಎದುರಿಸಲಿದ್ದಾರೆ.
ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ತನ್ನ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ಚೋಪ್ರಾ ವಿಫಲರಾಗಿದ್ದರೂ ಪ್ರತಿಷ್ಠಿತ ಗೋಲ್ಡನ್ ಸ್ಪೈಕ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.