ಮಧ್ಯಪ್ರದೇಶ: ಸರಕಾರಿ ಆಸ್ಪತ್ರೆಯಲ್ಲಿ ಇಲಿಗಳು ಕಚ್ಚಿ ನವಜಾತ ಶಿಶು ಮೃತ್ಯು
ಸಾಂದರ್ಭಿಕ ಚಿತ್ರ (PTI)
ಇಂದೋರ್ : ಮಧ್ಯಪ್ರದೇಶದ ಇಂದೋರ್‌ನ ಮಹಾರಾಜ ಯಶವಂತ್ ರಾವ್ ಆಸ್ಪತ್ರೆಯಲ್ಲಿ ಇಲಿಗಳು ಕಚ್ಚಿದ ಎರಡು ಶಿಶುಗಳಲ್ಲಿ ಒಂದು ಶಿಶು ಮಂಗಳವಾರ ಮೃತಪಟ್ಟಿದೆ ಎಂದು ವರದಿಯಾಗಿದೆ.
ಆಸ್ಪತ್ರೆಯ ಅಧಿಕಾರಿಗಳು ಶಿಶು ನ್ಯುಮೋನಿಯಾದಿಂದ ಮೃತಪಟ್ಟಿದೆ ಹೊರತು ಇಲಿ ಕಡಿತದಿಂದಲ್ಲ ಎಂದು ಹೇಳಿಕೊಂಡಿದ್ದಾರೆ.
ಸರಕಾರಿ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಅಶೋಕ್ ಯಾದವ್ ಸಲ್ಲಿಸಿದ ವರದಿಯ ಪ್ರಕಾರ, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ರವಿವಾರ ಮತ್ತು ಸೋಮವಾರ ಶಿಶುಗಳನ್ನು ಇಲಿಗಳು ಕಚ್ಚಿವೆ. ತೀವ್ರ ನಿಗಾ ಘಟಕದಲ್ಲಿ ಇಲಿಗಳಿರುವುದನ್ನು ದಾದಿಯರು ಗಮನಿಸಿದ್ದರು. ಆದರೆ ಆ ಬಗ್ಗೆ ಅವರು ಮಾಹಿತಿ ನೀಡಿರಲಿಲ್ಲ. ಇದರ ಪರಿಣಾಮವಾಗಿ ಯಾವುದೇ ತಪಾಸಣೆ ಕೂಡ ನಡೆದಿಲ್ಲ ಎಂದು ಹೇಳಲಾಗಿದೆ.
ಶಿಶು ಮೃತಪಟ್ಟ ಬಳಿಕ ನರ್ಸ್‌ಗಳನ್ನು ಮತ್ತು ಸ್ವಚ್ಛತೆಯ ಕುರಿತ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದ್ದ ನರ್ಸಿಂಗ್ ಸೂಪರಿಂಟೆಂಡೆಂಟ್ ಅನ್ನು ವಜಾಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ ಕೀಟ ನಿಯಂತ್ರಣ ಮತ್ತು ಸ್ವಚ್ಛತೆಯ ಜವಾಬ್ದಾರಿ ವಹಿಸಿಕೊಂಡಿದ್ದ ಕಂಪೆನಿಗೆ 1 ಲಕ್ಷ ರೂ.ದಂಡ ವಿಧಿಸಲಾಗಿದೆ ಮತ್ತು ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.