×
Ad

ಒಡಿಶಾ: ರಾಯಗಢ ಪ್ರವೇಶಿಸಲು ಮೇಧಾ ಪಾಟ್ಕರ್‌ ಗೆ ನಿರ್ಬಂಧ

Update: 2025-06-05 21:19 IST

ಮೇಧಾ ಪಾಟ್ಕರ್‌ | PTI 

ಭುವನೇಶ್ವರ: ಬಾಕ್ಸೈಟ್ ಗಣಿಗಾರಿಕೆ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಒಡಿಶಾದ ರಾಯಗಢ ಜಿಲ್ಲೆಗೆ ಪ್ರವೇಶಿಸಲು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರಿಗೆ ಗುರುವಾರ ನಿರ್ಬಂಧ ವಿಧಿಸಲಾಗಿದೆ.

ಮೇಧಾ ಪಾಟ್ಕರ್ ಅವರು ರಾಯಗಢ ರೈಲು ನಿಲ್ದಾಣಕ್ಕೆ ಮುಂಜಾನೆ ಆಗಮಿಸಿದ ಕೂಡಲೇ ಅವರಿಗೆ, ‘‘ಜೂನ್ 4ರಿಂದ ಎರಡು ತಿಂಗಳ ಕಾಲ ಜಿಲ್ಲೆಗೆ ಪ್ರವೇಶ ನಿರಾಕರಿಸಲಾಗಿದೆ’’ ಎಂಬ ಆದೇಶವನ್ನು ನೀಡಲಾಯಿತು.

ಮೇಧಾ ಪಾಟ್ಕರ್ ಸೇರಿದಂತೆ 24 ಮಂದಿ ಸಾಮಾಜಿಕ ಹೋರಾಟಗಾರರಿಗೆ ರಾಯಗಢ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.

ರಾಯಗಢ ಜಿಲ್ಲೆಯಲ್ಲಿ ಅವರ ಚಲನವಲನ ಹಾಗೂ ಉಪಸ್ಥಿತಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಡಲು ಕಾರಣವಾಗಬಹುದು, ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟಾಗಬುಹುದ, ಜಿಲ್ಲೆಯಲ್ಲಿ ಆಡಳಿತ ವ್ಯವಹಾರ ಹಾಗೂ ಅಭಿವೃದ್ಧಿ ಪ್ರಕ್ರಿಯೆಯ ಸುಗಮ ನಿರ್ವಹಣೆಗೆ ಅಡ್ಡಿಯಾಗಬಹುದು ಎಂಬ ಸಕಾರಣ ಭೀತಿ ಇದೆ ಎಂದು ಜಿಲ್ಲಾಧಿಕಾರಿ ಪಾರುಲ್ ಪಟ್ವಾರಿ ಸಹಿ ಹಾಕಿದ ಆದೇಶದಲ್ಲಿ ಹೇಳಲಾಗಿದೆ.

ರಾಯಗಢ ಹಾಗೂ ಕೊರಾಪುಟ್ ಜಿಲ್ಲೆಗಳಲ್ಲಿ ಬಾಕ್ಸೈಟ್ ಗಣಿಗಾರಿಕೆ ವಿರುದ್ಧ ಪ್ರತಿಭಟನೆಯ ನೇತತ್ವ ವಹಿಸಿರುವ ‘ಮಾ ಮಾಟಿ ಮಾಲಿ ಸುರಕ್ಷಾ ಮಂಚ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೇಧಾ ಪಾಟ್ಕರ್ ಹಾಗೂ ಇತರ ಕೆಲವು ಸಾಮಾಜಿಕ ಹೋರಾಟಗಾರರು ಭಾಗವಹಿಸಲಿದ್ದರು.

ಅವರನ್ನು ಜಿಲ್ಲೆಯ ಗಡಿಗೆ ಕೊಂಡೊಯ್ಯಲು ಕಾಯುತ್ತಿದ್ದ ವಾಹನದೆಡೆಗೆ ಬೆಂಗಾವಲು ಪಡೆಯೊಂದಿಗೆ ತೆರಳುತ್ತಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಮೇಧಾ ಪಾಟ್ಕರ್, ನನ್ನ ಉಪಸ್ಥಿತಿ ಜನರಿಗೆ ಸಮಸ್ಯೆ ಸೃಷ್ಟಿಸಲು ನಾನು ಭಯೋತ್ಪಾದಕಳಲ್ಲ. ನಾನು ಈ ದೇಶದ ಪ್ರಜೆ. ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ, ಸುಸ್ಥಿರ ರೀತಿಯಲ್ಲಿ ರಾಷ್ಟ್ರದ ಬೆಳವಣಿಗೆಯನ್ನು ನಾವು ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.

ಅವರು ಮೂರು ದಿನಗಳ ಭೇಟಿಗೆ ರಾಜ್ಯಕ್ಕೆ ಆಗಮಿಸಿದ್ದರು ಎಂದು ಮೇಧಾ ಪಾಟ್ಕರ್ ಅವರ ಜೊತೆಗಿದ್ದ ನರೇಂದ್ರ ಮೊಹಾಂತಿ ತಿಳಿಸಿದ್ದಾರೆ.

ಪ್ರತಿಭಟನೆಯ ಕೇಂದ್ರವಾದ ರಾಯಗಢದ ಕಾಶಿಪುರದಲ್ಲಿ ಸುಮಾರು 240 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News