ಮತದಾರರ ಪಟ್ಟಿ ಪರಿಷ್ಕರಣೆಗೆ ವಿರೋಧ: ಎಸ್‌ಐಆರ್ ಪೋಸ್ಟರ್‌ಗಳನ್ನು ಹರಿದು ಕಸದ ಬುಟ್ಟಿಗೆ ಎಸೆದ ವಿಪಕ್ಷಗಳ ಸಂಸದರು
Photo credit: PTI
ಹೊಸದಿಲ್ಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(SIR) ಎಂಬ ಭಿತ್ತಿಪತ್ರವನ್ನು ಹರಿದು ಕಸದ ಬುಟ್ಟಿಗೆ ಎಸೆಯುವ ಮೂಲಕ, ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನಕ್ಕೆ ವಿರೋಧಿಸಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಸಂಸದರು ಶುಕ್ರವಾರ ನೂತನ ಸಂಸತ್ ಭವನ ಸಂಕೀರ್ಣದೆದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಸಂಸತ್ ಭವನದ ಸಂಕೀರ್ಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಸದರು, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನವನ್ನು ಹಿಂಪಡೆಯಬೇಕು. ಈ ವಿಷಯದ ಕುರಿತು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸಂಸತ್ ಕಲಾಪ ಪ್ರಾರಂಭಗೊಳ್ಳುವುದಕ್ಕೂ ಮೊದಲೇ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ಟಿಎಂಸಿ, ಆರ್‌ಜೆಡಿ ಹಾಗೂ ಎಡಪಕ್ಷಗಳು ಸೇರಿದಂತೆ ವಿವಿಧ ವಿರೋಧ ಪಕ್ಷಗಳ ಸಂಸದರು, 'ಎಸ್‌ಐಆರ್ - ಜನತಂತ್ರದ ವಿರುದ್ಧ ಸಮರ' ಎಂಬ ಬಿತ್ತಿ ಚಿತ್ರಗಳನ್ನು ಹಿಡಿದುಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು.