ಜಾಮೀನಿನ ಮೇಲೆ ಹೊರಬಂದು ಸಂತ್ರಸ್ತೆಗೆ ಗುಂಡಿಕ್ಕಿದ ಅತ್ಯಾಚಾರ ಪ್ರಕರಣದ ಆರೋಪಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದಿಲ್ಲಿಯ ವಸಂತ್ ವಿಹಾರ್‌ನಲ್ಲಿ ಕಳೆದ ವರ್ಷ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ ಸಂತ್ರಸ್ತೆಯನ್ನು ಗುಂಡಿಕ್ಕಿ ಹತ್ಯೆ ಮಾಡಲು ಯತ್ನಿಸಿದ್ದಾನೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಸಲೂನ್‌ವೊಂದರಲ್ಲಿ ವ್ಯವಸ್ಥಾಪಕಿಯಾಗಿದ್ದ ಮಹಿಳೆಯ ಎದೆಗೆ ಗುಂಡು ತಗುಲಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯನ್ನು ಹತ್ಯೆ ಮಾಡಲು ಯತ್ನಿಸಿದ ಅಬುಝೈರ್ ಸಫಿ (30) ಮತ್ತು ಆತನ ಸಹಚರ ಅಮನ್ ಸುಖ್ಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬೈಕ್‌ನಲ್ಲಿ ಬಂದ ಅಬುಝೈರ್ ಸಫಿ ಮತ್ತು ಅಮನ್ ಸುಖ್ಲಾ ಮಹಿಳೆಯ ಮೇಲೆ ಗುಂಡಿಕ್ಕಿದ್ದಾರೆ. ಅಬುಝೈರ್ ಸಫಿ ಕಳೆದ ವರ್ಷ ಮಹಿಳೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಹೇಳಿಕೆಯ ಆಧಾರದ ಮೇಲೆ ವಸಂತ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.