ಲೈಟರ್ ಆಕಾರದ ರಹಸ್ಯ ಕ್ಯಾಮೆರಾದಲ್ಲಿ ಮಹಿಳೆಯರ ವೀಡಿಯೊ ಚಿತ್ರೀಕರಣ: ದಿಲ್ಲಿಯಲ್ಲಿ ಖಾಸಗಿ ಏರ್‌ಲೈನ್ ಪೈಲಟ್ ಬಂಧನ
ಬಂಧಿತ ಆರೋಪಿ (Photo: NDTV)
ಹೊಸದಿಲ್ಲಿ: ಮಹಿಳೆಯರ ಆಕ್ಷೇಪಾರ್ಹ ವೀಡಿಯೊಗಳನ್ನು ಗುಪ್ತವಾಗಿ ಚಿತ್ರೀಕರಿಸಲು ಯತ್ನಿಸಿದ ಆರೋಪದ ಮೇಲೆ ಖಾಸಗಿ ವಿಮಾನಯಾನ ಸಂಸ್ಥೆಯ ಪೈಲಟ್ ಒಬ್ಬನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಲೈಟರ್ ಆಕಾರದ ರಹಸ್ಯ ಕ್ಯಾಮೆರಾ ವಶಪಡಿಸಿಕೊಳ್ಳಲಾಗಿದೆ.
ಬಂಧಿತನನ್ನು ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಸಿವಿಲ್ ಲೈನ್ಸ್ ಪ್ರದೇಶದ ನಿವಾಸಿ ಮೋಹಿತ್ ಪ್ರಿಯದರ್ಶಿ (31) ಎಂದು ಗುರುತಿಸಲಾಗಿದೆ. ಆಗಸ್ಟ್ 30ರಂದು ಮಹಿಳೆಯೊಬ್ಬರು ದಾಖಲಿಸಿದ ದೂರಿನ ಆಧಾರದ ಮೇಲೆ ದಿಲ್ಲಿಯ ನೈಋತ್ಯ ಜಿಲ್ಲೆಯ ಕಿಶನ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ದೂರು ನೀಡಿರುವ ಮಹಿಳೆಯ ಪ್ರಕಾರ, ಆಗಸ್ಟ್ 30ರ ರಾತ್ರಿ ಸುಮಾರು 10.20ರ ವೇಳೆಗೆ ಕಿಶನ್‌ಗಢ ಶನಿ ಬಜಾರ್ ಪ್ರದೇಶದಲ್ಲಿ ತಿರುಗಾಡುತ್ತಿದ್ದಾಗ, ಲೈಟರ್ ಆಕಾರದ ರಹಸ್ಯ ಕ್ಯಾಮೆರಾ ಬಳಸಿ ತನ್ನ ಆಕ್ಷೇಪಾರ್ಹ ವೀಡಿಯೊಗಳನ್ನು ಚಿತ್ರೀಕರಿಸಲು ಯತ್ನಿಸುತ್ತಿದ್ದ ಆರೋಪಿಯನ್ನು ಗಮನಿಸಿದ್ದಾಗಿ ಅವರು ಹೇಳಿದ್ದಾರೆ.
ಘಟನೆಯ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ಪ್ರಕರಣವನ್ನು ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 77/78 ಅಡಿಯಲ್ಲಿ ದಾಖಲಿಸಿಕೊಂಡು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.
ಈ ತಂಡವನ್ನು ಕಿಶನ್‌ಗಢ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ಅಜಯ್ ಕುಮಾರ್ ಯಾದವ್ ನೇತೃತ್ವದಲ್ಲಿ, ಎಸಿಪಿ ಸಬ್-ಡಿವಿಷನ್ ಸಫ್ದರ್ಜಂಗ್ ಎನ್‌ಕ್ಲೇವ್ ಮೆಲ್ವಿನ್ ವರ್ಗೀಸ್ ಅವರ ಮೇಲ್ವಿಚಾರಣೆಯಲ್ಲಿ ರಚಿಸಲಾಗಿತ್ತು. ಸಬ್ ಇನ್ಸ್‌ಪೆಕ್ಟರ್ ದಿವ್ಯಾ ಯಾದವ್, ಹೆಡ್ ಕಾನ್ಸ್‌ಟೇಬಲ್ ಯೋಗೇಶ್, ಶ್ಯಾಮ್ ಸುಂದರ್, ಕಾನ್ಸ್‌ಟೇಬಲ್ ಮೋಹನ್ ಮತ್ತು ಸಿಟಿ ವಿಕಾಸ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತನಿಖೆಯ ಅಂಗವಾಗಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಶಂಕಿತನ ಚಿತ್ರವನ್ನು ಸಾರ್ವಜನಿಕವಾಗಿ ಹಂಚಲಾಗಿತ್ತು. ಜೊತೆಗೆ, ಸ್ಥಳೀಯ ಬೀಟ್ ಸಿಬ್ಬಂದಿ ಮತ್ತು ಮಾಹಿತಿದಾರರನ್ನು ಸಕ್ರಿಯಗೊಳಿಸಿ ಶಂಕಿತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿತ್ತು.
ಸ್ಥಳೀಯ ಗುಪ್ತಚರ ಮಾಹಿತಿ ಮತ್ತು ತಾಂತ್ರಿಕ ಸುಳಿಗಳ ಆಧಾರದ ಮೇಲೆ ಮೋಹಿತ್ ಪ್ರಿಯದರ್ಶಿಯನ್ನು ಬಂಧಿಸಲಾಗಿದೆ. ವಿಚಾರಣೆಯ ವೇಳೆ, ಆರೋಪಿಯು ಅವಿವಾಹಿತನಾಗಿದ್ದು, ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ವೈಯಕ್ತಿಕ ತೃಪ್ತಿಗಾಗಿ ಮಹಿಳೆಯರ ಗುಪ್ತ ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದನೆಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನಿಂದ ಲೈಟರ್ ಆಕಾರದ ರಹಸ್ಯ ಕ್ಯಾಮೆರಾ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.