ಅಮೆರಿಕದ ಸುಂಕಾಸ್ತ್ರದ ಬಳಿಕ ಪ್ರಧಾನಿ ಮೋದಿ ಪುಟಿನ್‌ಗೆ ಕರೆ ಮಾಡಿರಲಿಲ್ಲ : ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟನೆ
ನರೇಂದ್ರ ಮೋದಿ, ವ್ಲಾದಿಮಿರ್ ಪುಟಿನ್ | PC : ANI
ಹೊಸದಿಲ್ಲಿ,ಸೆ.26: ಅಮೆರಿಕದ ಸುಂಕ ಕ್ರಮದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ರಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಕರೆ ಮಾಡಿದ್ದರು ಎಂಬ ಇತ್ತೀಚಿನ ಹೇಳಿಕೆಗಾಗಿ ನ್ಯಾಟೊ ಮುಖ್ಯಸ್ಥ ಮಾರ್ಕ್ ರುಟ್ಟೆ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ಶುಕ್ರವಾರ ತರಾಟೆಗೆತ್ತಿಕೊಂಡಿದೆ. ಕಟುವಾದ ಪ್ರತಿಕ್ರಿಯೆಯಲ್ಲಿ ಎಂಇಎ ರುಟ್ಟೆ ಹೇಳಿಕೆಯನ್ನು ‘ವಾಸ್ತವಿಕವಾಗಿ ತಪ್ಪು’ ಮತ್ತು ‘ಸಂಪೂರ್ಣ ಆಧಾರರಹಿತ’ ಎಂದು ಬಣ್ಣಿಸಿದೆ.
ರುಟ್ಟೆ ಹೇಳಿರುವಂತೆ ಪ್ರಧಾನಿ ಮೋದಿಯವರು ಯಾವುದೇ ಹಂತದಲ್ಲಿಯೂ ಪುಟಿನ್ ಜೊತೆ ಮಾತನಾಡಿರಲಿಲ್ಲ ಎಂದು ಸ್ಪಷ್ಟ ಪಡಿಸಿದ ಎಂಇಎ ವಕ್ತಾರ ರಣಧೀರ ಜೈಸ್ವಾಲ್ ಅವರು, ‘ನ್ಯಾಟೊದಂತಹ ಬೃಹತ್ ಸಂಸ್ಥೆಯ ಮುಖ್ಯಸ್ಥರು ಹೆಚ್ಚಿನ ಹೊಣೆಗಾರಿಕೆಯನ್ನು ತೋರಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಇವೆಲ್ಲ ಊಹಾತ್ಮಕ ಮತ್ತು ಅಸಡ್ಡೆಯ ಹೇಳಿಕೆಗಳಾಗಿವೆ ’ಎಂದು ಹೇಳಿದರು.
ಇತ್ತೀಚಿಗೆ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದಂಡನಾತ್ಮಕ ಸುಂಕಗಳನ್ನು ಬೆಂಬಲಿಸಿದ್ದ ರುಟ್ಟೆ, ಈ ಕ್ರಮಗಳು ಈಗಾಗಲೇ ಉಕ್ರೇನ್‌ನಲ್ಲಿನ ಯುದ್ಧದ ಮೇಲೆ ಪರಿಣಾಮ ಬೀರಿವೆ ಎಂದು ಹೇಳಿದ್ದರು. ಟ್ರಂಪ್ ಕ್ರಮದ ಬಳಿಕ ಮೋದಿಯವರು ಪುಟಿನ್‌ಗೆ ಕರೆ ಮಾಡಿ ಉಕ್ರೇನ್ ಯೋಜನೆಯ ಬಗ್ಗೆ ಕೇಳಿದ್ದರು ಎಂದು ಅವರು ಪ್ರತಿಪಾದಿಸಿದ್ದರು.