ಬಿಎಸ್‌ಎನ್‌ಎಲ್‌ನ ಸ್ವದೇಶಿ 4ಜಿ ನೆಟ್‌ವರ್ಕ್ ಉದ್ಘಾಟಿಸಿದ ಪ್ರಧಾನಿ ಮೋದಿ
97,500 ಟವರ್‌ಗಳಿಗೆ ಚಾಲನೆ
ನರೇಂದ್ರ ಮೋದಿ
ಜಾರ್ಸುಗುಡಾ(ಒಡಿಶಾ): ಡಿಜಿಟಲ್ ಇಂಡಿಯಾದತ್ತ ದೊಡ್ಡ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಇಲ್ಲಿ BSNL ನ ‘ಸ್ವದೇಶಿ’ 4ಜಿ ನೆಟ್‌ವರ್ಕ್‌ನ್ನು ಉದ್ಘಾಟಿಸಿದರು. ಇದು ದೇಶದ ದೂರಸಂಪರ್ಕ ವಲಯಕ್ಕೆ ಮಹತ್ವದ ಹೆಜ್ಜೆಯಾಗಿದೆ. ಬಿಎಸ್‌ಎನ್‌ಎಲ್‌ನ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸ್ವದೇಶಿ 4ಜಿ ನೆಟ್‌ವರ್ಕ್ ನಿರ್ಣಾಯಕ ಮೂಲಸೌಕರ್ಯದಲ್ಲಿ ಸ್ಥಳೀಯ ತಂತ್ರಜ್ಞಾನಕ್ಕೆ ಸರಕಾರವು ಒತ್ತು ನೀಡುತ್ತಿರುವುದನ್ನು ಸೂಚಿಸಿದೆ.
ಈ ಬೆಳವಣಿಗೆಯು ಡಿಜಿಟಲ್ ಸಂಪರ್ಕವನ್ನು ವಿಸ್ತರಿಸುವಲ್ಲಿ ಮತ್ತು ಗ್ರಾಮೀಣ ಸಬಲೀಕರಣವನ್ನು ಹೆಚ್ಚಿಸುವಲ್ಲಿ ಒಂದು ಪ್ರಮುಖ ಮೈಲಿಗಲ್ಲು ಆಗಿದೆ. ಸ್ವದೇಶಿ 4ಜಿ ನೆಟ್‌ವರ್ಕ್ ಆರಂಭಗೊಂಡಿರುವುದು ಪ್ರಧಾನಿಯವರ ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ಅನುಗುಣವಾಗಿ ಪರಿವರ್ತನಾತ್ಮಕ ಹೆಜ್ಜೆಯಾಗುದೆ. ಇದು ಡಿಜಿಟಲ್ ಅಂತರವನ್ನು ಕಡಿಮೆ ಮಾಡುತ್ತದೆ ಮತ್ತು ಗ್ರಾಮೀಣ ಸಮುದಾಯಗಳನ್ನು ಸಬಲಗೊಳಿಸುತ್ತದೆ,ಇದೇ ವೇಳೆ ಬಿಎಸ್‌ಎನ್‌ಎಲ್‌ನ 5ಜಿ ಅಪ್‌ಗ್ರೇಡ್ ಮತ್ತು ಏಕೀಕರಣಕ್ಕೆ ಮಾರ್ಗವನ್ನು ಸುಗಮಗೊಳಿಸುತ್ತದೆ. ನೂತನ ಸೌಲಭ್ಯವು 20 ಲಕ್ಷ ಹೊಸ ಚಂದಾದಾರರಿಗೆ ಸೇವೆಯನ್ನು ಒದಗಿಸಲಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಮೋದಿ ಅವರು ಬಿಎಸ್‌ಎನ್‌ಎಲ್ ನಿರ್ಮಿಸಿದ 97,500ಕ್ಕೂ ಅಧಿಕ ಮೊಬೈಲ್ 4ಜಿ ಟವರ್‌ಗಳಿಗೂ ಚಾಲನೆ ನೀಡಿದರು. ಇವುಗಳಲ್ಲಿ ಹೊಸ 4ಜಿ ತಂತ್ರಜ್ಞಾನವನ್ನು ಒಳಗೊಂಡ 92,600 ಸೈಟ್‌ಗಳು ಸೇರಿವೆ. ಸುಮಾರು 37,000 ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಈ ಟವರ್‌ಗಳು ಸಂಪೂರ್ಣವಾಗಿ ದೇಶಿಯ ತಂತ್ರಜ್ಞಾನವನ್ನು ಬಳಸಲಿದ್ದು, ತನ್ಮೂಲಕ ದೇಶಿಯ ಟೆಲಿಕಾಂ ಉತ್ಪಾದನಾ ಸಾಮರ್ಥ್ಯಗಳನ್ನು ಹೊಂದಿರುವ ಆಯ್ದ ರಾಷ್ಟ್ರಗಳ ಸಾಲಿಗೆ ಭಾರತವು ಸೇಪಡೆಗೊಂಡಿದೆ.
ಸ್ವದೆಶಿ 4ಜಿ ನೆಟ್ ವರ್ಕ್‌ನ್ನು ಅನಾವರಣಗೊಳಿಸಿದ ಮೋದಿ, ಮುಂಬರುವ ದಶಕವು ಒಡಿಶಾವನ್ನು ಸಮೃದ್ಧಿಯತ್ತ ಕೊಂಡೊಯ್ಯಲಿದೆ ಎಂದರು. ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಈ ರಾಜ್ಯವು ಇನ್ನು ಮುಂದೆ ಹಿಂದುಳಿಯುವುದಿಲ್ಲ ಎಂದು ಘೋಷಿಸಿದ ಅವರು ಸೆಮಿಕಂಡಕ್ಟರ್ ಪಾರ್ಕ್‌ಗಾಗಿ ಯೋಜನೆಯನ್ನು ಪ್ರಕಟಿಸಿದರು.
ಹೊಸದಾಗಿ ಆರಂಭಗೊಂಡಿರುವ ಭಾರತ ನಿರ್ಮಿತ ನೆಟ್‌ವರ್ಕ್‌ನ್ನು ಕ್ಲೌಡ್-ಆಧಾರಿತ ಮತ್ತು ಭವಿಷ್ಯದ ನವೀಕರಣಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.
ಭಾರತ ನಿರ್ಮಿತ ನೆಟ್‌ವರ್ಕ್ ಕ್ಲೌಡ್-ಆಧಾರಿತವಾಗಿದ್ದು,ಭವಿಷ್ಯದ ಅಗತ್ಯಕ್ಕೆ ಸನ್ನದ್ಧವಾಗಿದೆ ಮತ್ತು ಸರಾಗವಾಗಿ 5ಜಿ ಗೆ ಅಪ್‌ಗ್ರೇಡ್ ಮಾಡಬಹುದು ಎಂದು ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.