ನಾಳೆ(ಆ.17) ಚುನಾವಣಾ ಆಯೋಗದಿಂದ ಪತ್ರಿಕಾಗೋಷ್ಠಿ: ರಾಹುಲ್ ಗಾಂಧಿಯ ಮತಗಳ್ಳತನದ ಆರೋಪಕ್ಕೆ ಸ್ಪಷ್ಟನೆ ಸಾಧ್ಯತೆ
ಚುನಾವಣಾ ಆಯೋಗ | PC : PTI
ಹೊಸದಿಲ್ಲಿ: ಭಾರತೀಯ ಚುನಾವಣಾ ಆಯೋಗವು ಹೊಸದಿಲ್ಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಾಳೆ(ಆ.17) ಮಧ್ಯಾಹ್ನ ಮೂರು ಗಂಟೆಗೆ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮತಗಳ್ಳತನ ಆರೋಪ ಸೇರಿದಂತೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ವಿವರಣೆ ನೀಡುವ ಸಾಧ್ಯತೆ ಇದೆ.
ಬಿಹಾರದಲ್ಲಿ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಗೆ ಚಾಲನೆ ನೀಡಿದಾಗಿನಿಂದ, ಚುನಾವಣಾ ಅಯೋಗ ನಡೆಸುತ್ತಿರುವ ಪ್ರಥಮ ಪತ್ರಿಕಾಗೋಷ್ಠಿ ಇದಾಗಿದೆ.
ಭಾರತೀಯ ಚುನಾವಣಾ ಆಯೋಗವು ಈ ತಿಂಗಳ ಆರಂಭದಲ್ಲಿ ಬಿಹಾರದಲ್ಲಿ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಗೆ ಚಾಲನೆ ನೀಡಿತ್ತು. ಬಿಹಾರ ವಿಧಾನಸಭೆ ಇನ್ನು ಸುಮಾರು ನಾಲ್ಕು ತಿಂಗಳಲ್ಲಿ ನಡೆಯಲಿದೆ. ಹೀಗಿದ್ದೂ ಮುಂಚಿತವಾಗಿಯೇ ಮತಪಟ್ಟಿ ಪರಿಷ್ಕರಣೆಗೆ ಚಾಲನೆ ನೀಡಿರುವ ಕ್ರಮವನ್ನು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ. ಸದ್ಯ ನಡೆಯುತ್ತಿರುವ ಮಾನ್ಸೂನ್ ಸಂಸತ್ ಅಧಿವೇಶನದಲ್ಲೂ ಇದು ಚರ್ಚೆಯ ವಿಷಯವಾಗಿ ಬದಲಾಗಿದೆ.
ಈ ನಡುವೆ, ಚುನಾವಣಾ ಆಯೋಗದ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 2024ರ ಲೋಕಸಭಾ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಇದರಿಂದ ಬಿಜೆಪಿಗೆ ಲಾಭವಾಗಿದೆ ಎಂದು ಆರೋಪಿಸುತ್ತಿದ್ದಾರೆ.
ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಕರ್ನಾಟಕದಂತಹ ಪ್ರಮುಖ ರಾಜ್ಯಗಳಲ್ಲಿ ಮತಪಟ್ಟಿಗೆ ನಕಲಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎಂದು ಅವರು ನಿರ್ದಿಷ್ಟವಾಗಿ ಚುನಾವಣಾ ಆಯೋಗವನ್ನು ದೂಷಿಸಿದ್ದಾರೆ.