×
Ad

ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Update: 2025-10-29 20:49 IST

ದ್ರೌಪದಿ ಮುರ್ಮು | Photo Credit : PTI

ಚಂಡಿಗಡ,ಅ.29: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಅಂಬಾಲಾ ವಾಯುಪಡೆ ನಿಲ್ದಾಣದಿಂದ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ತನ್ಮೂಲಕ ಭಾರತೀಯ ವಾಯುಪಡೆಯ(ಐಎಎಫ್) ಎರಡು ವಿಭಿನ್ನ ಯುದ್ಧ ವಿಮಾನಗಳಲ್ಲಿ ಹಾರಾಟ ಕೈಗೊಂಡ ಭಾರತದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ 2023,ಎ.8ರಂದು ಅವರು ಅಸ್ಸಾಮಿನ ತೇಜಪುರ ವಾಯುಪಡೆ ನಿಲ್ದಾಣದಿಂದ ಸುಖೋಯಿ-30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು.

ಸುಮಾರು 30 ನಿಮಿಷಗಳ ಹಾರಾಟದ ಬಳಿಕ ವಾಯುನೆಲೆಗೆ ಮರಳುವ ಮುನ್ನ ರಾಷ್ಟ್ರಪತಿ ಸುಮಾರು 200 ಕಿ.ಮೀ.ಗಳನ್ನು ಕ್ರಮಿಸಿದ್ದರು. ‘ಗೋಲ್ಡನ್ ಆ್ಯರೋಸ್’ ಎಂದೂ ಕರೆಯಲಾಗುವ 17ನೇ ಸ್ಕ್ವಾಡ್ರನ್ನ ಕಮಾಂಡಿಂಗ್ ಆಫೀಸರ್ ಅಮಿತ್ ಗೆಹಾನಿ ಅವರು ವಿಮಾನದ ಪೈಲಟ್ ಆಗಿ ಕಾರ್ಯ ನಿರ್ವಹಿಸಿದ್ದರು. ವಿಮಾನವು ಸಮುದ್ರ ಮಟ್ಟದಿಂದ ಸುಮಾರು 15,000 ಅಡಿ ಎತ್ತರದಲ್ಲಿ ಪ್ರತಿ ಗಂಟೆಗೆ ಸುಮಾರು 700 ಕಿ.ಮೀ.ವೇಗದಲ್ಲಿ ಹಾರಾಟ ನಡೆಸಿತ್ತು.

ಸಂದರ್ಶಕರ ಪುಸ್ತಕದಲ್ಲಿ ರಫೇಲ್ನಲ್ಲಿಯ ತನ್ನ ಅನುಭವವನ್ನು ಹಂಚಿಕೊಂಡಿರುವ ಮುರ್ಮು,‘ರಫೇಲ್ ವಿಮಾನದಲ್ಲಿ ನನ್ನ ಮೊದಲ ಹಾರಾಟಕ್ಕಾಗಿ ಅಂಬಾಲಾದಲ್ಲಿಯ ವಾಯುಪಡೆ ನಿಲ್ದಾಣಕ್ಕೆ ಭೇಟಿ ನೀಡಿದ್ದು ನನಗೆ ಸಂತಸವನ್ನುಂಟು ಮಾಡಿದೆ. ರಫೇಲ್ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ್ದು ನನ್ನ ಪಾಲಿಗೆ ಮರೆಯಲಾಗದ ಅನುಭವ. ಶಕ್ತಿಶಾಲಿ ರಫೇಲ್ ವಿಮಾನದಲ್ಲಿ ನನ್ನ ಹಾರಾಟವು ದೇಶದ ರಕ್ಷಣಾ ಸಾಮರ್ಥ್ಯಗಳ ಬಗ್ಗೆ ನನ್ನಲ್ಲಿ ಹೆಮ್ಮೆಯ ಹೊಸ ಭಾವನೆಯನ್ನು ಮೂಡಿಸಿದೆ. ಈ ಹಾರಾಟವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಭಾರತೀಯ ವಾಯುಪಡೆ ಮತ್ತು ಅಂಬಾಲಾ ವಾಯುಪಡೆ ನಿಲ್ದಾಣದ ಸಮಗ್ರ ತಂಡಕ್ಕೆ ನನ್ನ ಅಭಿನಂದನೆಗಳು’ ಎಂದು ಬರೆದಿದ್ದಾರೆ.

ಯುದ್ಧ ವಿಮಾನವನ್ನು ಹತ್ತುವ ಮುನ್ನ ರಾಷ್ಟ್ರಪತಿ ಮುರ್ಮು ಅವರು ಜಿ-ಸೂಟ್ ಧರಿಸಿ ಕೈಯಲ್ಲಿ ಹೆಲ್ಮೆಟ್ ಹಿಡಿದುಕೊಂಡು ಭಾರತದ ಮೊದಲ ಮಹಿಳಾ ಫೈಟರ್ ಜೆಟ್ ಪೈಲಟ್ ಶಿವಾಂಗಿ ಸಿಂಗ್ ಅವರ ಜೊತೆ ಛಾಯಾಚಿತ್ರಗಳಿಗೆ ಪೋಸ್ ನೀಡಿದರು.

ವಾಯುನೆಲೆಗೆ ರಾಷ್ಟ್ರಪತಿಗಳ ಕಿರುಭೇಟಿಯ ಅವಧಿಯಲ್ಲಿ ರಫೇಲ್ ಮತ್ತು ಭಾರತೀಯ ವಾಯುಪಡೆಯ ಕಾರ್ಯಾಚರಣೆ ಸಾಮರ್ಥ್ಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News