ಪುದುಚೇರಿ: ಶಾಲೆಗೆ ಬ್ಯಾಗ್‌ನಲ್ಲಿ ಬಾಂಬ್ ತುಂಬಿಕೊಂಡು ಬಂದು ಸಹಪಾಠಿಗೆ ಚೂರಿಯಿಂದ ಇರಿದ ವಿದ್ಯಾರ್ಥಿ!
ಸಾಂದರ್ಭಿಕ ಚಿತ್ರ | PC : NDTV
ಪುದುಚೇರಿ: ವಿದ್ಯಾರ್ಥಿಯೋರ್ವ ತನ್ನ ಸಹಪಾಠಿಗೆ ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ಇಲ್ಲಿನ ರೆಡ್ಡಿಯಾರ್‌ಪಾಲ್ಯಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ತನ್ನನ್ನು ನಿಂದಿಸಿರುವುದಕ್ಕೆ ಆಕ್ರೋಶಿತನಾದ 11ನೇ ತರಗತಿ ವಿದ್ಯಾರ್ಥಿ ಸೇಡು ತೀರಿಸಿಕೊಳ್ಳಲು ಶಾಲೆಗೆ ಚಾಕು ತೆಗೆದುಕೊಂಡು ಹೋಗಿದ್ದಾನೆ. ಅಲ್ಲಿ ತನ್ನನ್ನು ನಿಂದಿಸಿದ ಸಹಪಾಠಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಆತನಿಗೆ ಇರಿದಿದ್ದಾನೆ. ಅನಂತರ ಸಹಪಾಠಿಗೆ ಇರಿದ ವಿದ್ಯಾರ್ಥಿಯ ಬ್ಯಾಗ್ ಪರಿಶೀಲಿಸಿದಾಗ ದೇಶಿ ನಿರ್ಮಿತ 6 ಬಾಂಬ್‌ಗಳು ಕೂಡ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಚಾಕುವಿನಿಂದ ಇರಿತಕ್ಕೆ ಒಳಗಾದ ವಿದ್ಯಾರ್ಥಿ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಖಾತೆ ಸೃಷ್ಟಿಸಿ ಹಲ್ಲೆ ಮಾಡಿದ ವಿದ್ಯಾರ್ಥಿಗೆ ಸಂದೇಶ ಕಳುಹಿಸುತ್ತಿದ್ದ. ಆತನಿಗೆ ಅವಮಾನ ಮಾಡುತ್ತಿದ್ದ ಎಂದು ಮೂಲಗಳು ಹೇಳಿವೆ.
ಗುರುವಾರ ಅಪರಾಹ್ನ ಊಟದ ವಿರಾಮದ ವೇಳೆ ವಿದ್ಯಾರ್ಥಿ ಚಾಕುವಿನೊಂದಿಗೆ ಆಗಮಿಸಿ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಖಾತೆ ಸೃಷ್ಟಿಸಿದ ವಿದ್ಯಾರ್ಥಿಗೆ ಬೈದಿದ್ದಾನೆ. ಇತರ ವಿದ್ಯಾರ್ಥಿಗಳು ಮಧ್ಯ ಪ್ರವೇಶಿಸುವ ಮುನ್ನವೇ ಆತ ಸಹಪಾಠಿಯ ಕೈಗೆ ಇರಿದಿದ್ದಾನೆ. ಅನಂತರ ಶಿಕ್ಷಕರು ಮಧ್ಯಪ್ರವೇಶಿಸಿ ಆತನ ಕೈಯಿಂದ ಚಾಕುವನ್ನು ಕಸಿದುಕೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗೆ ಚಿಕಿತ್ಸೆ ನೀಡಿದ್ದಾರೆ. ಆತನ ಹೆತ್ತವರಿಗೆ ಮಾಹಿತಿ ನೀಡಿದ್ದಾರೆ.
ಅನಂತರ ಶಿಕ್ಷಕರು ಸಹಪಾಠಿಗೆ ಚೂರಿಯಿಂದ ಇರಿದ ವಿದ್ಯಾರ್ಥಿಯ ಬ್ಯಾಗ್ ಪರಿಶೀಲಿಸಿದಾಗ ದೇಶಿ ನಿರ್ಮಿತ 6 ಬಾಂಬ್‌ಗಳು ಪತ್ತೆಯಾಗಿವೆ. ಕೂಡಲೇ ಶಾಲೆಯ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿತು. ಸ್ಥಳಕ್ಕಾಗಮಿಸಿದ ಪೊಲೀಸರು ಬಾಂಬ್‌ಗಳನ್ನು ವಶಪಡಿಸಿಕೊಂಡರು ಹಾಗೂ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡರು. ಆತನನ್ನು ಬಾಲ ನ್ಯಾಯ ಮಂಡಳಿಗೆ ಶಿಫಾರಸು ಮಾಡಿದರು.
ಸೇಡು ತೀರಿಸಿಕೊಳ್ಳುವ ತನ್ನ ಯೋಜನೆಯ ಭಾಗವಾಗಿ ಚಾಕು ಖರೀದಿಸಿ ಶಾಲೆಗೆ ತಂದಿರುವುದಾಗಿ ಹಾಗೂ ಬಾಂಬ್‌ಗಳನ್ನು ಸಿದ್ಧಪಡಿಸಿರುವುದಾಗಿ ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಗಳ ಅಡಿ ಹಾಗೂ ಸ್ಫೋಟಕ ವಸ್ತು ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಯ ಹೆತ್ತವರು ದೂರು ದಾಖಲಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಖಾಸಗಿ ಶಾಲೆಗಳ ಆಡಳಿತಾತ್ಮಕ ಲೋಪ ಹಾಗೂ ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುವಲ್ಲಿನ ವಿಫಲತೆಗೆ ಶಾಲಾ ಶಿಕ್ಷಣ ಇಲಾಖೆಯನ್ನು ‘ಫ್ರೀಡಂ ಫಾರ್ ಪೀಪಲ್ಸ್ ರೈಟ್ಸ್’ ಖಂಡಿಸಿದ್ದು, ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗಿಂತ ತಮ್ಮ ಲಾಭಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದೆ.
ವಿದ್ಯಾರ್ಥಿಗಳಲ್ಲಿ ಹಿಂಸಾತ್ಮಕ ಪ್ರವೃತ್ತಿಗಳನ್ನು ತಡೆಯಬಹುದಾದ ನೈತಿಕ ಶಿಕ್ಷಣ, ಕ್ರೀಡೆ ಹಾಗೂ ಪಠ್ಯೇತರ ಚಟುವಟಕೆಗಳು ಶಾಲೆಯಲ್ಲಿ ಮಾಯವಾಗುತ್ತಿವೆ ಎಂದು ಒಕ್ಕೂಟದ ಕಾರ್ಯದರ್ಶಿ ಜಿ. ಸುಗುಮಾರನ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.