ಪುರಿ ದೇಗುಲ ಕಾಲ್ತುಳಿತ: ಪರಿಹಾರ ಕಾರ್ಯ ತ್ವರಿತಕ್ಕೆ ಒಡಿಶಾ ಸರಕಾರಕ್ಕೆ ರಾಹುಲ್ ಗಾಂಧಿ ಆಗ್ರಹ
ರಾಹುಲ್ ಗಾಂಧಿ | PC : PTI
ಪುರಿ: ಪುರಿ ದೇಗುಲದಲ್ಲಿ ಕಾಲ್ತುಳಿತ ಘಟನೆಯನ್ನು ‘ದೊಡ್ಡ ದುರಂತ’ ಎಂದು ರವಿವಾರ ಬಣ್ಣಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಒಡಿಶಾ ಸರಕಾರವನ್ನು ಆಗ್ರಹಿಸಿದ್ದಾರೆ.
ರವಿವಾರ ಬೆಳಿಗ್ಗೆ ನಾಲ್ಕು ಗಂಟೆಯ ಸುಮಾರಿಗೆ ರಥಯಾತ್ರೆಯನ್ನು ವೀಕ್ಷಿಸಲು ನೂರಾರು ಭಕ್ತರು ಇಲ್ಲಿಯ ಶ್ರೀ ಗುಂಡಿಚಾ ದೇವಸ್ಥಾನದ ಬಳಿ ಸೇರಿದ್ದಾಗ ಕಾಲ್ತುಳಿತ ಸಂಭವಿಸಿ ಇಬ್ಬರು ಮಹಿಳೆಯರು ಸೇರಿದಂತೆ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಪರಿಹಾರ ಕಾರ್ಯಗಳಲ್ಲಿ ಸಾಧ್ಯವಿರುವ ಎಲ್ಲ ನೆರವನ್ನು ಒದಗಿಸುವಂತೆ ರಾಹುಲ್ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆಯನ್ನೂ ನೀಡಿದ್ದಾರೆ.
‘ಇಂತಹ ದೊಡ್ಡ ಕಾರ್ಯಕ್ರಮಗಳಿಗೆ ಭದ್ರತೆ ಮತ್ತು ಜನಸಂದಣಿ ನಿರ್ವಹಣೆ ಸಿದ್ಧತೆಗಳನ್ನು ಕೂಲಂಕಶವಾಗಿ ಪರಿಶೀಲಿಸಬೇಕು ಎನ್ನುವುದನ್ನು ಈ ದುರಂತವು ನೆನಪಿಸಿದೆ. ಜನರ ಜೀವಗಳನ್ನು ರಕ್ಷಿಸುವುದು ಅತ್ಯಂತ ಮುಖ್ಯವಾಗಿದೆ ಮತ್ತು ಈ ಜವಾಬ್ದಾರಿಯಲ್ಲಿ ಯಾವುದೇ ಲೋಪವು ಸ್ವೀಕಾರಾರ್ಹವಲ್ಲ’ ಎಂದು ರಾಹುಲ್ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.