ಮೋದಿ ನಿಂದನೆಗಾಗಿ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು: ಅಮಿತ್ ಶಾ
ಅಮಿತ್ ಶಾ | PC: PTI
ಹೊಸದಿಲ್ಲಿ, ಆ. 29: ಬಿಹಾರದ ದರ್ಭಾಂಗದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ‘ವೋಟರ್ ಅಧಿಕಾರ ಯಾತ್ರೆ’ಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿಯ ಬಗ್ಗೆ ನಿಂದನಾತ್ಮಕ ಭಾಷೆ ಬಳಸಲಾಗಿದೆ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಆರೋಪಿಸಿದ್ದಾರೆ. ಅದಕ್ಕಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಕ್ಷಮೆ ಕೇಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮೋದಿ ವಿರುದ್ಧ ಕೆಟ್ಟ ಭಾಷೆ ಬಳಸಿದ ಆರೋಪದಲ್ಲಿ ಬಿಹಾರ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ ಬಳಿಕ, ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ.
‘‘ಪ್ರಧಾನಿ ಮತ್ತು ಅವರ ದಿವಂಗತ ತಾಯಿಯ ಕುರಿತ ನಿಂದನೆಗಳಿಗಾಗಿ ರಾಹುಲ್ ಗಾಂಧಿ ಕ್ಷಮೆ ಕೋರಬೇಕು’’ ಎಂದು ಗುವಾಹಟಿಯಲ್ಲಿ ಮಾತನಾಡಿದ ಅಮಿತ್ ಶಾ ಹೇಳಿದರು.
ಈ ಘಟನೆಯು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪಾಟ್ನಾದಲ್ಲಿ ಘರ್ಷಣೆ ನಡೆಸಿದರು.
ದರ್ಭಾಂಗ ಪಟ್ಟಣದಲ್ಲಿ ಬುಧವಾರ ನಡೆದ ಮತಾಧಿಕಾರ ಯಾತ್ರೆಯ ಸಂದರ್ಭದಲ್ಲಿ, ವೇದಿಕೆಯಿಂದ ವ್ಯಕ್ತಿಯೋರ್ವ ಮೋದಿ ಬಗ್ಗೆ ಬಳಸಿದ ಹಿಂದಿ ಪದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಪದಾಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ, ಆ ಪದವನ್ನು ಬಳಸಿರುವ ಮುಹಮ್ಮದ್ ರಿಝ್ವಿ (20) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.