×
Ad

ರಾಜಸ್ಥಾನ | ರಣತಂಬೋರ್ ಹುಲಿ ಸಫಾರಿ ನಡುವೆ ಕಾಡಿನ ಮಧ್ಯದಲ್ಲೇ ಪ್ರವಾಸಿಗರನ್ನು ಬಿಟ್ಟು ತೆರಳಿದ ಗೈಡ್!

Update: 2025-08-17 21:01 IST

 ಸಾಂದರ್ಭಿಕ ಚಿತ್ರ | PC : NDTV 

 

ರಣತಂಬೋರ್ (ರಾಜಸ್ಥಾನ): ಆಘಾತಕಾರಿ ಘಟನೆಯೊಂದರಲ್ಲಿ ಹುಲಿ ಸಫಾರಿಗೆಂದು ಕಾಡಿಗೆ ತೆರಳಿದ್ದ ಪ್ರವಾಸಿಗರನ್ನು ದಟ್ಟ ಕಾಡಿನ ನಡುವೆಯೇ ಬಿಟ್ಟು ಗೈಡ್ ಒಬ್ಬರು ಪರಾರಿಯಾಗಿರುವ ಘಟನೆ ರಾಜಸ್ಥಾನದ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.

ಪ್ರವಾಸಿಗರ ಗುಂಪೊಂದು ರಣತಂಬೋರ್ ರಾಷ್ಟ್ರೀಯ ಉದ್ಯಾನವನದ ವಲಯ 6ಕ್ಕೆ ಹುಲಿ ಸಫಾರಿಗೆಂದು ತೆರಳಿತ್ತು. ಈ ವೇಳೆ ಅವರನ್ನು ಕಾಡಿಗೆ ಕರೆದೊಯ್ದಿದ್ದ ಕ್ಯಾಂಟರ್ ವಾಹನ ಮಾರ್ಗಮಧ್ಯದಲ್ಲೇ ಕೆಟ್ಟು ನಿಂತಿತ್ತು. ಆಗ ಸಫಾರಿ ಗೈಡ್ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಮಹಿಳೆಯರು, ಮಕ್ಕಳು ಹಾಗೂ ಇನ್ನಿತರ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಕ್ಯಾಂಟರ್ ವಾಹನವೊಂದು ಸಂಜೆ ಆರು ಗಂಟೆ ವೇಳೆಗೆ ಮಾರ್ಗಮಧ್ಯದಲ್ಲೇ ಕೆಟ್ಟು ನಿಂತಿದೆ. ಆಗ ಮತ್ತೊಂದು ಕ್ಯಾಂಟರ್ ವಾಹನವನ್ನು ವ್ಯವಸ್ಥೆಗೊಳಿಸುವುದಾಗಿ ಅದರಲ್ಲಿದ್ದ ಗೈಡ್ ವಾಹನವನ್ನು ತೊರೆದಿದ್ದಾನೆ. ಆದರೆ, ಪರ್ಯಾಯ ವಾಹನದ ವ್ಯವಸ್ಥೆ ಮಾಡುವ ಬದಲು, ಪ್ರವಾಸಿಗರೊಂದಿಗೆ ಅನುಚಿತ ವರ್ತನೆ ತೋರಿ, ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಘಟನೆಯ ವೀಡಿಯೊವನ್ನು ಪ್ರವಾಸಿಗರು ಚಿತ್ರೀಕರಿಸಿಕೊಂಡಿದ್ದು, ಆ ವೀಡಿಯೊದಲ್ಲಿ ಕತ್ತಲಲ್ಲಿ ಕುಳಿತಿರುವ ಮಕ್ಕಳು ಮೊಬೈಲ್ ಟಾರ್ಚ್ ಅನ್ನು ಆನ್ ಮಾಡಿಕೊಂಡು ಭಯದಿಂದ ಕಾಡಿನ ಮಧ್ಯೆ ಅಳುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ಕಾಡು ಸುಮಾರು 60 ಹುಲಿಗಳಿಗೆ ಆವಾಸ ಸ್ಥಾನ ಎಂದು ಹೇಳಲಾಗಿದೆ. ಇದಲ್ಲದೆ ಈ ಸ್ಥಳದಲ್ಲಿ ಚಿರತೆಗಳು, ಕಪ್ಪು ಕರಡಿ ಹಾಗೂ ಜವುಗು ಮೊಸಳೆಗಳೂ ವಾಸಿಸುತ್ತವೆ ಎನ್ನಲಾಗಿದೆ.

ಪ್ರವಾಸಿಗರನ್ನು ರಕ್ಷಿಸುವುದಕ್ಕೂ ಮುನ್ನ, ಅವರು ಸಂಜೆ 6 ಗಂಟೆಯಿಂದ 7.30ರವರೆಗೆ ಕಾಡಿನ ನಡುವೆ ಸಿಲುಕಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಲ್ಲಿ ನಿರ್ಲಕ್ಷ್ಯ ತೋರಿರುವುದು ಸಾಬೀತಾದರೆ, ಗೈಡ್ ಹಾಗೂ ವಾಹನದ ಚಾಲಕನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ರಣತಂಬೋರ್ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕ ಹಾಗೂ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅನೂಪ್ ಕೆ.ಆರ್. ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News