ಉತ್ತರ ಪ್ರದೇಶ | ಗಾಯಕನ ವಿರುದ್ಧ ಅತ್ಯಾಚಾರದ ಆರೋಪ: ಸಂತ್ರಸ್ತ ಮಹಿಳೆಯಿಂದ ಸಿಎಂ ನಿವಾಸದ ಮುಂದೆ ಆತ್ಮದಹನಕ್ಕೆೆ ವಿಫಲ ಯತ್ನ
ಸಾಂದರ್ಭಿಕ ಚಿತ್ರ | PC : PTI
ಲಕ್ನೋ,ಸೆ.6: ಹರಿಯಾಣಿ ಭಾಷೆಯ ಜಾನಪದ ಗಾಯಕ ಉತ್ತರ ಕುಮಾರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಎರಡು ತಿಂಗಳ ಹಿಂದೆ ಆರೋಪಿಸಿದ್ದ ನೊಯ್ಡಾದ ಮಹಿಳೆಯೊಬ್ಬರು ಶುಕ್ರವಾರ ಲಕ್ನೋದಲ್ಲಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ನಿವಾಸದೆದುರು ಆತ್ಮದಹನಕ್ಕೆ ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
ಯುವತಿಯು ಮೈಗೆ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದಾಗ ಮುಖ್ಯಮಂತ್ರಿಯವರ ನಿವಾಸದ ಹೊರಗೆ ನಿಯೋಜಿತರಾಗಿದ್ದ ಭದ್ರತಾಸಿಬ್ಬಂದಿ ಸಕಾಲದಲ್ಲಿ ಧಾವಿಸಿ ಆಕೆಯನ್ನು ತಡೆದಿದ್ದಾರೆ. ಆನಂತರ ಮಹಿಳೆಯನ್ನು ಗೌತಮ್‌ಪಲ್ಲಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು.
ಉತ್ತಮ್ ಕುಮಾರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಿ ಮಹಿಳೆಯು ಜೂನ್ 24ರಂದು ಗಾಝಿಯಾಬಾದ್‌ನ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ 25 ದಿನಗಳ ಬಳಿಕ ಹೈಕೋರ್ಟ್ ನಿರ್ದೇಶನ ನೀಡಿದ ಆನಂತರವಷ್ಟೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದಾಗ್ಯೂ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಲಿಲ್ಲ. ಈ ಬಗ್ಗೆ ಪೊಲೀಸರಲ್ಲಿ ವಿಚಾರಿಸಿದರೂ ಅವರು ಯಾವುದೇ ಕ್ರಮವನ್ನು ಕೈಗೊಂಡಿಲ್ಲವೆಂದು ಮಹಿಳೆ ಆಪಾದಿಸಿದ್ದರು.
ಈ ವಿಳಂಬದಿಂದಾಗಿ ಹತಾಶಗೊಂಡ ಮಹಿಳೆ ಲಕ್ನೋಗೆ ಆಗಮಿಸಿ ಮುಖ್ಯಮಂತ್ರಿಯ ನಿವಾಸದ ಮುಂದೆ ಆತ್ಮದಹನಕ್ಕೆ ಯತ್ನಿಸಿದ್ದಾಳೆನ್ನಲಾಗಿದೆ.ಈ ಘಟನೆಗೆ ಮುನ್ನ ಮಹಿಳೆಯು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಯ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಖ್ಯಮಂತ್ರಿ ನಿವಾಸದ ಬಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದರೆನ್ನಲಾಗಿದೆ.