ಗಂಡನೇ ಅತ್ಯಾಚಾರವೆಸಗಿದರೂ ಅದು ಅತ್ಯಾಚಾರದ ಅಪರಾಧವೇ ಆಗಿದೆ: ಗುಜರಾತ್ ಹೈಕೋರ್ಟ್
ಸಾಂದರ್ಭಿಕ ಚಿತ್ರ (PTI)
ಅಹ್ಮದಾಬಾದ್: ಅತ್ಯಾಚಾರವು ಅತ್ಯಾಚಾರವೇ ಆಗಿದೆ, ಅದು ಪುರುಷನೊಬ್ಬ ತನ್ನ ಪತ್ನಿಯ ಮೇಲೆ ಮಾಡಿದರೂ ಅತ್ಯಾಚಾರವೇ ಆಗಿರುತ್ತದೆ, ಎಂದು ಗುಜರಾತ್ ಹೈಕೋರ್ಟ್ ಹೇಳಿದೆಯಲ್ಲದೆ ಭಾರತದಲ್ಲಿ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯದ ಸುತ್ತ ಇರುವ ಮೌನವನ್ನು ಮುರಿಯಬೇಕಿದೆ ಎಂದು ಹೇಳಿದೆ.
ಅಂಕಿಅಂಶಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರ ವಿರುದ್ಧದ ಅಪರಾಧದ ಪ್ರಕರಣಗಳು ದೇಶದಲ್ಲಿ ನಡೆಯುತ್ತಿವೆ ಹಾಗೂ ಮಹಿಳೆಯರು ಹಿಂಸೆಯ ವಾತಾವರಣದಲ್ಲಿ ಇರುವುದು ಮುಂದುವರಿಯಬಹುದು ಎಂದು ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ಜಸ್ಟಿಸ್ ದಿವ್ಯೇಶ್ ಜೋಷಿ ಹೇಳಿದರು.
“ಹುಡುಗರು ಹುಡುಗರೇ ಆಗಿರುತ್ತಾರೆ” ಎಂಬ ದೃಷ್ಟಿಕೋನದಲ್ಲಿ ಲೈಂಗಿಕ ಅಪರಾಧಗಳನ್ನು ಪರಿಗಣಿಸಿದರೆ ಅದು ಸಂತ್ರಸ್ತೆಯರ ಮೇಲೆ ಗಂಭೀರ ಪರಿಣಾಮ ಬೀರುವುದು ಎಂದು ಅವರು ಹೇಳಿದರು.
ಸೊಸೆಯೊಂದಿಗೆ ಕ್ರೂರವಾಗಿ ವರ್ತಿಸಿದ್ದೇ ಅಲ್ಲದೆ ತನ್ನ ಪತಿ ಹಾಗೂ ಪುತ್ರ ಆಕೆಯ ಮೇಲೆ ಅತ್ಯಾಚಾರಗೈಯ್ಯುವುದನ್ನು ಚಿತ್ರೀಕರಿಸಿ ಅದನ್ನು ಹಣ ಗಳಿಸಲು ಪೋರ್ನ್ ಸೈಟ್‌ಗಳಿಗೆ ಪೋಸ್ಟ್ ಮಾಡಿದ ತಪ್ಪಿಗಾಗಿ ಬಂಧಿಸಲ್ಪಟ್ಟಿರುವ ಮಹಿಳೆಗೆ ಜಾಮೀನು ನಿರಾಕರಿಸುವ ವೇಳೆ ಕೋರ್ಟ್ ಮೇಲಿನಂತೆ ಹೇಳಿದೆ.
“ಹೆಚ್ಚಿನ ಪ್ರಕರಣಗಳಲ್ಲಿ, ಅತ್ಯಾಚಾರವೆಸಗಿದವನು ಗಂಡನೇ ಆಗಿದ್ದರೆ ಆತನಿಗೆ ವಿನಾಯಿತಿ ನೀಡಲಾಗುತ್ತದೆ. ಆದರೆ ಅದು ಸರಿಯಲ್ಲ, ಪುರುಷ ಪುರುಷನೇ ಆಗಿದ್ದಾನೆ ಹಾಗೂ ಕೃತ್ಯ ಕೃತ್ಯವೇ ಆಗಿದೆ ಮತ್ತು ಅತ್ಯಾಚಾರವನ್ನು ಪುರುಷ ಮಹಿಳೆಯ ಮೇಲೆ ಅಥವಾ ಗಂಡನು ಹೆಂಡತಿಯ ಮೇಲೆ ಮಾಡಿದರೂ ಅದು ಅತ್ಯಾಚಾರವೇ ಆಗಿದೆ,” ಎಂದು ನ್ಯಾಯಾಲಯ ಹೇಳಿದೆ.