×
Ad

ಮಧ್ಯಪ್ರದೇಶ | ಸವರ್ಣೀಯರಿಂದ ದಲಿತ ಯುವಕನಿಗೆ ಥಳಿತ, ಮೂತ್ರ ಕುಡಿಯುವಂತೆ ಬಲವಂತ

Update: 2025-10-21 22:51 IST

ಸಾಂದರ್ಭಿಕ ಚಿತ್ರ

 

ಗ್ವಾಲಿಯರ್, ಅ.21: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮೂವರು ಸವರ್ಣೀಯರು ದಲಿತ ಯುವಕನೊಬ್ಬನನ್ನು ಅಪಹರಿಸಿ, ಆತನ ಮೇಲೆ ಹಲ್ಲೆ ನಡೆಸಿದ್ದು ಮತ್ತು ಬಲವಂತವಾಗಿ ಮೂತ್ರ ಸೇವಿಸುವಂತೆ ಮಾಡಿದ ಘಟನೆ ಮಧ್ಯಪ್ರದೇಶದ ಬಿಂಡ್ ಜಿಲ್ಲೆಯಲ್ಲಿ ಮಂಗಳವಾರ ವರದಿಯಾಗಿದೆ.

ದಲಿತ ಸಮುದಾಯದ ಸಂತ್ರಸ್ತನು ಬೊಲೆರೊ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ, ಇದಕ್ಕೂ ಮುನ್ನ ಆತ ಭಿಂಡ್‌ನ ನಿವಾಸಿ ಸೋನು ಬರು ಬಳಿ ಕೆಲಸ ಮಾಡಿದ್ದನು. ಇತ್ತೀಚೆಗೆ ಅವರ ಬಳಿ ಚಾಲಕ ವೃತ್ತಿಯನ್ನು ಬಿಟ್ಟಿದ್ದ ಆತ ಗ್ವಾಲಿಯರ್‌ನಲ್ಲಿರುವ ತನ್ನ ಪತ್ನಿಯ ತವರು ಮನೆಯಲ್ಲಿ ನೆಲೆಸಿದ್ದ.

ಮೂರು ದಿನಗಳ ಹಿಂದೆ ಸೋನು ಬರುವಾ ಅವರು ಅಲೋಕ್ ಪಾಠಕ್ ಹಾಗೂ ಛೋಟು ಓಝಾ ಎಂಬವರ ಜೊತೆ ತನ್ನ ಪತ್ನಿಯ ತವರು ಮನೆಗೆ ಬಂದಿದ್ದರು. ತಾನು ಅವರ ಬಳಿ ವಾಹನ ಚಾಲಕ ವೃತ್ತಿಯನ್ನು ಮತ್ತೆ ಕೈಗೊಳ್ಳಲು ನಿರಾಕರಿಸಿದಾಗ ರೋಷಗೊಂಡ ಅವರು ತನ್ನನ್ನು ಬೊಲೆರೊದಲ್ಲಿ ಬಲವಂತವಾಗಿ ಕೂಡಿ ಹಾಕಿ ಕೊಂಡೊಯ್ದಿದ್ದಾರೆ ಎಂದು ಆತ ಆರೋಪಿಸಿದ್ದಾರೆ.

ಭಿಂಡ್‌ಗೆ ತನ್ನನ್ನು ಕೊಂಡೊಯ್ದ ಆರೋಪಿಗಳು, ತನಗೆ ಪ್ಲಾಸ್ಟಿಕ್ ಪೈಪ್‌ನಿಂದ ಒಂದೇ ಸಮನೆ ಹಲ್ಲೆ ಮಾಡಿದ್ದರು ಹಾಗೂ ಮದ್ಯ ಸೇವಿಸುವಂತೆ ಮಾಡಿದ್ದರು. ಆನಂತರ ಮೂತ್ರವನ್ನು ಕುಡಿಯುವಂತೆ ಬಲವಂತಪಡಿಸಿದ್ದರು. ಅಕುಟುಪುರಾ ಗ್ರಾಮಕ್ಕೆ ತನ್ನನ್ನು ಕೊಂಡೊಯ್ದ ಆರೋಪಿಗಳು ಅಲ್ಲಿ ತನ್ನ ಮೇಲೆ ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕಿ, ರಾತ್ರಿಯಿಡೀ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ.

ಕೊನೆಗೂ ಸಂತ್ರಸ್ತನು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು. ಆತ ಭಿಂಡ್‌ನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಭೀಮ್ ಆರ್ಮಿಯ ಸದಸ್ಯರು ಆಸ್ಪತ್ರೆಯ ಮುಂದುಗಡೆ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಒಂದು ವೇಳೆ ಸೂಕ್ತ ನ್ಯಾಯ ದೊರೆಯದೇ ಇದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ಬಳಿಕ ಸಚಿವ ರಾಕೇಶ್ ಶುಕ್ಲಾ, ಭಿಂಡ್ ಜಿಲ್ಲಾಧಿಕಾರಿ ಕಿರೋಡಿ ಲಾಲ್ ಮೀನಾ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂಜೀವ್ ಪಾಠಕ್ ಆಸ್ಪತ್ರೆಗೆ ಆಗಮಿಸಿ ಸಂತ್ರಸ್ತನನ್ನು ಭೇಟಿಯಾದರು. ಈ ಕೃತ್ಯವನ್ನು ಎಸಗಿದ ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆಯೆಂದು ಪಾಠಕ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News