×
Ad

ಬಿಹಾರದಲ್ಲಿ ಭ್ರಷ್ಟಾಚಾರ ಆರೋಪ: ಪ್ರಶಾಂತ್ ಕಿಶೋರ್‌ಗೆ ಬಿಜೆಪಿ ಹಿರಿಯ ನಾಯಕ ಆರ್.ಕೆ. ಸಿಂಗ್ ಬೆಂಬಲ

Update: 2025-09-24 22:40 IST

 ಆರ್.ಕೆ. ಸಿಂಗ್ | PTI

ಪಾಟ್ನಾ: ಬಿಹಾರ ರಾಜಕೀಯದಲ್ಲಿ ಭ್ರಷ್ಟಾಚಾರ ವಿವಾದ ತೀವ್ರಗೊಂಡಿರುವ ನಡುವೆ, ಜನ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ (ಪಿಕೆ) ಅವರ ಆರೋಪಗಳಿಗೆ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಬೆಂಬಲ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಎನ್‌ಡಿಎ ಸರಕಾರಕ್ಕೆ ಗಂಭೀರ ಸವಾಲುಗಳನ್ನು ಒಡ್ಡಿದೆ.

ಆರ್.ಕೆ. ಸಿಂಗ್ ಅವರು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪಗಳನ್ನು ತಿರಸ್ಕರಿಸಲು ವಿಫಲವಾದರೆ ಅವರು ತಮ್ಮ ಹುದ್ದೆಗಳನ್ನು ತ್ಯಜಿಸಬೇಕು ಎಂದು ಹೇಳಿದ್ದಾರೆ. “ಆರೋಪಗಳು ಸುಳ್ಳಾದರೆ ಸಾಕ್ಷ್ಯಾಧಾರಗಳನ್ನು ಒದಗಿಸಿ ಪ್ರಶಾಂತ್ ಕಿಶೋರ್ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಬೇಕು. ಇಲ್ಲವಾದರೆ ರಾಜೀನಾಮೆ ನೀಡಬೇಕು” ಎಂದು ಸ್ಪಷ್ಟಪಡಿಸಿದ್ದಾರೆ.

ಪಿಕೆ ಎಂದೇ ಕರೆಯಲ್ಪಡುವ ಪ್ರಶಾಂತ್ ಕಿಶೋರ್ ಅವರು ಸಾಮ್ರಾಟ್ ಚೌಧರಿ ತಮ್ಮ ವಿದ್ಯಾರ್ಹತೆಯ ಬಗ್ಗೆ ಸುಳ್ಳು ಪ್ರಚಾರ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಮೆಟ್ರಿಕ್ಯುಲೇಷನ್ ಕೂಡ ಪೂರೈಸದಿರುವ ಚೌಧರಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಿ-ಲಿಟ್ ಪದವಿ ಪಡೆದಿದ್ದೇನೆ ಎಂದು ತೋರಿಸಿಕೊಂಡಿದ್ದಾರೆ. ಜೊತೆಗೆ, ಕೊಲೆ ಯತ್ನ ಪ್ರಕರಣದಲ್ಲಿ ನಕಲಿ ಜನನ ಪ್ರಮಾಣಪತ್ರ ಬಳಸಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಚೌಧರಿಯ ಮೂಲ ಹೆಸರು “ರಾಕೇಶ್ ಕುಮಾರ್” ಆಗಿದ್ದು, ಬಳಿಕ ಅದನ್ನು ಸಾಮ್ರಾಟ್ ಕುಮಾರ್ ಮೌರ್ಯ ಎಂದು ಬದಲಾಯಿಸಿಕೊಂಡಿದ್ದರು. ಮತ್ತೆ ಅದನ್ನು ಸಾಮ್ರಾಟ್ ಚೌಧರಿ ಎಂದು ಬದಲಾಯಿಸಿಕೊಂಡರು ಎಂದು ಪ್ರಶಾಂತ್ ಕಿಶೋರ್ ಆರೋಪ ಮಾಡಿದ್ದರು.

ಇದಲ್ಲದೆ, ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಅಕ್ರಮವಾಗಿ ಅಲ್ಪಸಂಖ್ಯಾತರ ವೈದ್ಯಕೀಯ ಕಾಲೇಜನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಹಾಗೂ ಆರೋಗ್ಯ ಸಚಿವ ಮಂಗಲ್ ಪಾಂಡೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದಕ್ಕೂ ತಮ್ಮ ಬಳಿ ಸಾಕ್ಷ್ಯಗಳಿವೆ ಎಂದು ಕಿಶೋರ್ ತಿಳಿಸಿದ್ದಾರೆ. ಈ ಆರೋಪಗಳ ಕುರಿತು ಪಾಟ್ನಾ ಹೈಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದಾರೆ.

“ಸಾಮ್ರಾಟ್ ಚೌಧರಿ ತಮ್ಮ ಮೆಟ್ರಿಕ್ಯುಲೇಷನ್ ಹಾಗೂ ಪದವಿ ಪ್ರಮಾಣಪತ್ರಗಳನ್ನು ಸಾರ್ವಜನಿಕವಾಗಿ ತೋರಿಸಬೇಕು. ಅವರು ಈ ಕುರಿತಂತೆ ಮೌನವಾಗಿರುವುದು ಪಕ್ಷಕ್ಕೆ ಹಾನಿ ಮಾಡುತ್ತದೆ” ಎಂದು ಆರ್ ಕೆ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.

“ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಕೂಡ ಸ್ಪಷ್ಟನೆ ನೀಡಬೇಕು. ಕಿಶನ್‌ಗಂಜ್ ಹತ್ತಿರ ಅವರ ಹೆಸರಿನಲ್ಲಿ ನಡೆಯುತ್ತಿರುವ ವೈದ್ಯಕೀಯ ಕಾಲೇಜನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂಬುದಕ್ಕೆ ಜನ ಸುರಾಜ್ ನಾಯಕ ಪ್ರಶಾಂತ್ ಕಿಶೋರ್ ಸಾಕ್ಷ್ಯಾಧಾರಗಳನ್ನು ನೀಡಿದ್ದಾರೆ. ಪಕ್ಷದ ನಾಯಕರ ವಿರುದ್ಧ ಈ ರೀತಿಯ ಆರೋಪಗಳು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಭವಿಷ್ಯಕ್ಕೆ ಹೊಡೆತ ನೀಡುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ನಡುವೆ, ರಾಜ್ಯ ರಾಜಕೀಯದಲ್ಲಿ ಒಬಿಸಿ ಸಮುದಾಯದ ಪ್ರಮುಖ ಮುಖವೆಂದು ಪರಿಗಣಿಸಲ್ಪಡುವ ಸಾಮ್ರಾಟ್ ಚೌಧರಿಯನ್ನು ಬಿಜೆಪಿ ಸಿಎಂ ಅಭ್ಯರ್ಥಿ ಎಂದು ಬಿಂಬಿಸುತ್ತಿದೆ. ಕುಶ್ವಾಹ ಸಮುದಾಯದ ಮತಗಳನ್ನು ತನ್ನತ್ತ ಸೆಳೆಯಲು, ಕೇಂದ್ರ ನಾಯಕತ್ವವು ಈ ತಂತ್ರವನ್ನು ಅನುಸರಿಸುತ್ತಿದೆ ಎನ್ನಲಾಗಿದೆ.

ಅಧಿಕೃತವಾಗಿ ಬಿಜೆಪಿ ಈ ಆರೋಪಗಳ ಕುರಿತು ಮೌನವನ್ನು ಕಾಯ್ದುಕೊಂಡಿದ್ದರೂ, ಕೆಲ ನಾಯಕರು ಆರ್.ಕೆ. ಸಿಂಗ್ ಅವರನ್ನು ಟೀಕಿಸಿದ್ದಾರೆ. “ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿನ ನಿರಾಶೆಯಿಂದ ಅವರು ಪಕ್ಷದ ಭವಿಷ್ಯ ಹಾಳುಮಾಡಲು ಯತ್ನಿಸುತ್ತಿದ್ದಾರೆ,” ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆಲವು ನಾಯಕರು ಹೇಳಿದ್ದಾರೆ.

ಗೃಹ ಸಚಿವಾಲಯದ ಮಾಜಿ ಕಾರ್ಯದರ್ಶಿಯಾಗಿದ್ದ ಆರ್.ಕೆ. ಸಿಂಗ್ ನಿವೃತ್ತಿಯ ನಂತರ 2014ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದರು. ಅರಾ ಕ್ಷೇತ್ರದಿಂದ ಎರಡು ಬಾರಿ ಗೆದ್ದ ಅವರು, ಮೋದಿ ಸರಕಾರದಲ್ಲಿ ವಿದ್ಯುತ್ ಸಚಿವರಾಗಿದ್ದರು. ಆದರೆ 2024ರ ಚುನಾವಣೆಯಲ್ಲಿ ಸೋಲಿನ ನಂತರ ಅವರನ್ನು ಪಕ್ಷದಲ್ಲಿ ಬದಿಗೆ ಸರಿಸಲಾಗಿದೆ.

ಸೌಜನ್ಯ: telegraphindia.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News