ಇನ್ಮುಂದೆ ರಸ್ತೆ ಅವಘಡದ ಸಂತ್ರಸ್ತರಿಗೆ ನಗದು ರಹಿತ ಉಚಿತ ಚಿಕಿತ್ಸೆ
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ತುರ್ತು ಚಿಕಿತ್ಸಾ ಸೇವೆಯನ್ನು ಸುಧಾರಣೆಗೊಳಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯೆಂಬಂತೆ, ಭಾರತ ಸರಕಾರವು ಎಲ್ಲಾ ರಸ್ತೆ ಅವಘಡದ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆಯನ್ನು ಒದಗಿಸುವ ರಾಷ್ಟ್ರವ್ಯಾಪಿ ಯೋಜನೆಯೊಂದನ್ನು ಮಂಗಳವಾರ ಔಪಚಾರಿಕವಾಗಿ ಜಾರಿಗೊಳಿಸಿದೆ.
ಈ ಯೋಜನೆಯಡಿ ಭಾರತದ ಎಲ್ಲೆಡೆಯೂ ರಸ್ತೆ ಅಪಘಾತದ ಸಂತ್ರಸ್ತರು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೆರಡರಲ್ಲೂ 1.5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಲಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಘೋಷಿಸಿದ ಈ ಯೋಜನೆಯು ಅಪಘಾತದ ಆನಂತರ ನಿರ್ಣಾಯಕವಾದ ‘ ಅಮೂಲ್ಯ ತಾಸು’ಗಳ ಸಂದರ್ಭದಲ್ಲಿ ತಕ್ಷಣವೇ ಚಿಕಿತ್ಸೆಯನ್ನು ಒದಗಿಸುವ ಮೂಲಕ ಜನರ ಪ್ರಾಣವನ್ನು ಉಳಿಸುವ ಉದ್ದೇಶವನ್ನು ಹೊಂದಿದೆ.
ರಸ್ತೆ ಅವಘಡ ಸಂತ್ರಸ್ತರ ನಗದುರಹಿತ ಚಿಕಿತ್ಸೆ ವ್ಯವಸ್ಥೆ 2025’ ಎಂದು ಹೆಸರಿಡಲಾದ ಈ ಯೋಜನೆಯನ್ನು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಜಾರಿಗೆ ತಂದಿದೆ. ತುರ್ತು ಚಿಕಿತ್ಸೆಯನ್ನು ಕ್ಷಿಪ್ರವಾಗಿ ಹಾಗೂ ಉಚಿತವಾಗಿ ಒದಗಿಸುವ ಮೂಲಕ ರಸ್ತೆ ಅವಘಡದ ಪ್ರಕರಣಗಳಲ್ಲಿ ಸಾವುನೋವುಗಳನ್ನು ಕಡಿಮೆಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ.
2023ರಲ್ಲಿ ಭಾರತದಲ್ಲಿ ಸುಮಾರು 4.80 ಲಕ್ಷ ರಸ್ತೆ ಅಪಘಾತದ ಪ್ರಕರಣಗಳು ವರದಿಯಾಗಿದ್ದು, ಒಟ್ಟು 1.72 ಲಕ್ಷ ಮಂದಿ ಸಾವನ್ನಪ್ಪಿದ್ದರು. ಆದರೆ ಸಮರ್ಪಕ ವೈದ್ಯಕೀಯ ನೆರವು ದೊರೆಯುತ್ತಿದ್ದಲ್ಲಿ ಇವರಲ್ಲಿ ಅನೇಕ ಮಂದಿ ಜೀವ ಉಳಿಯುವ ಸಾಧ್ಯತೆಯಿತ್ತು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಈ ಯೋಜನೆಯನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವಾಲಯವು 2024ರ ಮಾರ್ಚ್ 14ರಂದು ಆರಂಭಿಸಿತ್ತು. ಆದರೆ ಅದನ್ನು ರಾಷ್ಟ್ರಮಟ್ಟದಲ್ಲಿ ಅನುಷ್ಠಾನಗೊಳಿಸುವ ಮುನ್ನ ಹಲವಾರು ಪರಿಷ್ಕರಣೆಗಳನ್ನು ನಡೆಸಿತ್ತು.
ಯೋಜನೆಯ ಹೈಲೈಟ್ಸ್
► ಮೋಟಾರು ವಾಹನಗಳನ್ನು ಒಳಗೊಂಡ ರಸ್ತೆ ಅಪಘಾತ ಪ್ರಕರಣಗಳಲ್ಲಿ 1.5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ.
► ಅಪಘಾತ ಸಂಭವಿಸಿದ ಏಳು ದಿನಗೊಳಗೆ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ವಯಸ್ಸು, ಆದಾ ಅಥವಾ ಸಾಮಾಜಿಕ ಶ್ರೇಣಿಯ ಭೇದವಿಲ್ಲದೆ, ಎಲ್ಲಾ ವ್ಯಕ್ತಿಗಳು ಈ ಯೋಜನೆಯ ಫಲಾನುಭವಿಯಾಗಲು ಅರ್ಹರಾಗಿದ್ದಾರೆ.
► ಅಪಘಾತವು ಸಾರ್ವಜನಿಕ ರಸ್ತೆಯಲ್ಲಿ ಸಂಭವಿಸಿರಬೇಕು.
► ಅಪಘಾತದ ಬಳಿಕ ಚಿಕಿತ್ಸೆಯನ್ನು ಪಡೆಯಲು ಯಾವುದೇ ದಾಖಲೆಗಳು ಅಥವಾ ಗುರುತುಪತ್ರಗಳನ್ನು ಒದಗಿಸುವ ಅಗತ್ಯವಿರುವುದಿಲ್ಲ.
ಯಾರಿಗೆಲ್ಲಾ ಪ್ರಯೋಜನ?
► ವಾಹನ ಚಾಲಕರು, ಪ್ರಯಾಣಿಕರು, ಪಾದಚಾರಿಗಳು ಅಥವಾ ದಾರಿಹೋಕರು ಸೇರಿದಂತೆ ಭಾರತದ ಯಾವುದೇ ಸ್ಥಳದಲ್ಲಿ ಮೋಟಾರುವಾಹನವನ್ನು ಒಳಗೊಂಡ ರಸ್ತೆ ಅವಘದಲ್ಲಿ ಗಾಯಗೊಂಡವರು.
ಚಿಕಿತ್ಸೆಯನ್ನು ಎಲ್ಲೆಲ್ಲಿ ಪಡೆಯಬಹುದು.
► ಈ ಯೋಜನೆಯಡಿ ನಮೂದಿಸಲ್ಪಟ್ಟ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ ಲಭ್ಯ.
► ಒಂದು ವೇಳೆ ಸಂತ್ರಸ್ತನು, ಈ ಯೋಜನೆಯಡಿ ನಮೂದಿಸಲ್ಪಡದ ಆಸ್ಪತ್ರೆಗೆ ದಾಖಲಾದಲ್ಲಿ ಆ ಚಿಕಿತ್ಸೆಯು ಆತನ ದೇಹಸ್ಥಿತಿಯನ್ನು ಸ್ಥಿರಗೊಳಿಸುವುದಕ್ಕೆ ಮಾತ್ರವೇ ಸೀಮಿತವಾಗಿರುತ್ತದೆ.
► ಒಮ್ಮೆ ಆರಂಭಿಕ ಚಿಕಿತ್ಸೆಯನ್ನು ನೀಡಿದ ಬಳಿಕ, ಅಗತ್ಯಬಿದ್ದಲ್ಲಿ ಗಾಯಾಳುವನ್ನು ನಿಯೋಜಿತ ಆಸ್ಪತ್ರೆಗೆ ವರ್ಗಾಯಿಸಲಾಗುವುದು.
ಯೋಜನೆಯ ವ್ಯಾಪ್ತಿಗೆ ಬರುವ ಚಿಕಿತ್ಸೆಗಳು
► ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಔಷಧಿಗಳು ಹಾಗೂ ಡಯಾಗ್ನಾಸ್ಟಿಕ್ ಪ್ರಕ್ರಿಯೆಗಳು
► ತೀವ್ರ ನಿಗಾ ಘಟಕಕ್ಕೆ ದಾಖಲಾತಿ ಹಾಗೂ ಇತರ ಆಸ್ಪತ್ರೆ ಸೇವೆಗಳು
► ಪ್ರತಿ ವ್ಯಕ್ತಿಗೂ 1.5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ
► ಅಪಘಾತ ನಡೆದ ದಿನದಿಂದ 7 ದಿನಗಳವರೆಗೆ ಈ ಸೌಲಭ್ಯ ಊರ್ಜಿತದಲ್ಲಿರುವುದು.
ಎನ್‌ಎಚ್‌ಎಗೆ ಯೋಜನೆಯ ಅನುಷ್ಠಾನದ ಹೊಣೆ
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ)ಕ್ಕೆ ಈ ಯೋಜನೆಯ ಅನುಷ್ಠಾನದ ಹೊಣೆಗಾರಿಕೆ ನೀಡಲಾಗಿದೆ.ಈ ಯೋಜನೆಯ ಮೇಲ್ವಿಚಾರಣೆಗೆ ಹಾಗೂ ನೇರ ಜಾರಿಗಾಗಿ ಕೇಂದ್ರ ಸರಕಾರವು ಚಾಲನಾ ಸಮಿತಿಯೊಂದನ್ನು ರಚಿಸಲಾಗಿದೆ. ಆಸ್ಪತ್ರೆಗಳು, ಏಜೆನ್ಸಿಗಳು ಹಾಗೂ ರಾಜ್ಯಗಳು ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳುವುದನ್ನು ಹಾಗೂ ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವಂತೆ ಈ ಸಮಿತಿಯು ಮೇಲ್ವಿಚಾರಣೆ ನಡೆಸಲಿದೆ.