ಡಾಲರ್ ಎದುರು 90 ರೂಪಾಯಿಗಿಂತ ಕೆಳಕ್ಕೆ ಕುಸಿದ ರೂಪಾಯಿ ಮೌಲ್ಯ: ಈಗ ಅವರ ಉತ್ತರವೇನು ಎಂದು ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ | Photo Credit : PTI
ಹೊಸದಿಲ್ಲಿ: ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಪ್ರತಿ ಡಾಲರ್‌ಗೆ 90 ರೂ. ಗಿಂತ ಹೆಚ್ಚು ಇಳಿಕೆಯಾಗಿದೆ. ಇದರ ಬೆನ್ನಿಗೇ, "ಡಾ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ರೂಪಾಯಿ ಮೌಲ್ಯ ಕುಸಿತವನ್ನು ಟೀಕಿಸುತ್ತಿದ್ದವರು ಈಗೇನು ಉತ್ತರಿಸುತ್ತಾರೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.
ಗುರುವಾರ ಬೆಳಗ್ಗೆ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ 28 ಪೈಸೆಯಷ್ಟು ಕುಸಿದು, ಪ್ರತಿ ಡಾಲರ್‌ಗೆ ಸಾರ್ವಕಾಲಿಕ 90.43 ರೂ.ಗೆ ಇಳಿಕೆಯಾಗಿದೆ.
ಈ ಕುರಿತು ಸಂಸತ್ ಭವನ ಸಂಕೀರ್ಣದಲ್ಲಿ ಸುದ್ದಿಗಾರರು ಪ್ರಿಯಾಂಕಾ ಗಾಂಧಿಯನ್ನು ಪ್ರಶ್ನಿಸಿದಾಗ, "ಕೆಲ ವರ್ಷಗಳ ಹಿಂದೆ ಡಾ. ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಡಾಲರ್ ಮೌಲ್ಯ ಹೆಚ್ಚಿದ್ದಾಗ ಈ ಜನ ಏನು ಹೇಳಿದ್ದರು? ಅವರ ಉತ್ತರವೇನು? ನನ್ನನ್ನೇಕೆ ಕೇಳುತ್ತಿದ್ದೀರಿ? ಅವರನ್ನೇ ಕೇಳಿ" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ವಿದೇಶಿ ವಿನಿಮಯ ವ್ಯಾಪಾರಿಗಳ ಪ್ರಕಾರ, ಮಹತ್ವದ ಹಣಕಾಸು ನೀತಿ ಸಮಿತಿಯ ಸಭೆಗೂ ಮುನ್ನ ಆಮದುದಾರರಿಂದ ಡಾಲರ್ ಗಾಗಿನ ಬೇಡಿಕೆ ಅಧಿಕಗೊಂಡಿರುವುದರಿಂದ ರೂಪಾಯಿ ಮೌಲ್ಯದ ಮೇಲೆ ಒತ್ತಡ ಉಂಟಾಗಿದೆ ಎನ್ನಲಾಗಿದೆ.