ಡಾಲರ್‌ನೆದುರು ಸಾರ್ವಕಾಲಿಕ ಕನಿಷ್ಠ 89.7ಕ್ಕೆ ಕುಸಿದ ರೂಪಾಯಿ ಮೌಲ್ಯ
ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ,ಡಿ.1: ಭಾರತದ ರೂಪಾಯಿ ಮೌಲ್ಯವು ಸೋಮವಾರ ಅಮೆರಿಕದ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 89.7ಕ್ಕೆ ಕುಸಿದಿದೆ.
ರಾಯ್ಟರ್ಸ್ ಸುದ್ದಿಸಂಸ್ಥೆಯು ವರದಿ ಮಾಡಿರುವಂತೆ ಅಮೆರಿಕ ಮತ್ತು ಭಾರತದ ನಡುವೆ ವ್ಯಾಪಾರ ಒಪ್ಪಂದ ಕುರಿತು ಅನಿಶ್ಚಿತತೆಯೊಂದಿಗೆ ಮಂದಗತಿಯ ವ್ಯಾಪಾರ ಚಟುವಟಿಕೆ ಮತ್ತು ಬಂಡವಾಳ ಹರಿವಿನ ನಡುವೆ ಈ ಕುಸಿತ ಸಂಭವಿಸಿದೆ.
ಆದರೆ ಸಂಜೆಯ ವೇಳೆಗೆ ರೂಪಾಯಿ ಮೌಲ್ಯ 89.54ಕ್ಕೆ ಚೇತರಿಸಿಕೊಂಡಿತ್ತು. ಶುಕ್ರವಾರ ಬಿಡುಗಡೆಗೊಂಡ ಜಿಡಿಪಿಯ ಧನಾತ್ಮಕ ಅಂಕಿಅಂಶಗಳು ರೂಪಾಯಿಗೆ ಕೊಂಚ ನೆಮ್ಮದಿಯನ್ನು ಒದಗಿಸಿದ್ದವು. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ವರ್ಷದಿಂದ ವರ್ಷಕ್ಕೆ ಶೇ.8.2ರಷ್ಟು ಬೆಳವಣಿಗೆ ದಾಖಲಿಸಿದ್ದು,ಹಿಂದಿನ ತ್ರೈಮಾಸಿಕದಲ್ಲಿ ಅದು ಶೇ.7.8ರಷ್ಟಿತ್ತು.
ಕಳೆದ ವರ್ಷದ ಇದೇ ಅವಧಿಯಲ್ಲಿ ಆರ್ಥಿಕತೆಯು ಶೆ.5.6ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು.
ಆದರೆಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಪ್ರಗತಿಯ ಕೊರತೆ, ಆಮದುದಾರರಿಂದ ತಮ್ಮ ಹಿತಾಸಕ್ತಿಗಳ ರಕ್ಷಣೆಗಾಗಿ ಕ್ರಮಗಳು, ಪಾವತಿ ಸಮತೋಲನ ಸ್ಥಿತಿಯ ಕಡಿಮೆ ಬೆಂಬಲದಿಂದಾಗಿ ರೂಪಾಯಿ ಒತ್ತಡದಡಿ ಮುಂದುವರಿದಿದೆ ಎಂದು ಬ್ಯಾಂಕರ್‌ಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.