ಡಾಲರ್ ನೆದುರು 90ರ ಅಂಚಿಗೆ ಕುಸಿದ ರೂಪಾಯಿ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ನ.24: ಅಮೆರಿಕದ ಡಾಲರ್ ನೆದುರು ರೂಪಾಯಿ ಮೌಲ್ಯದ ತೀವ್ರ ಕುಸಿತ ಕುರಿತು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 2013ರಲ್ಲಿ ರೂಪಾಯಿ ಮೌಲ್ಯ ಕುಸಿತ ಕುರಿತು ಆಗಿನ ಯುಪಿಎ ಸರಕಾರದ ವಿರುದ್ಧ ಅವರು ಮಾಡಿದ್ದ ಟೀಕೆಗಳನ್ನು ನೆನಪಿಸಿದೆ.
ಸೋಮವಾರ ಡಾಲರ್ ನೆದುರು 89.46ರಲ್ಲಿ ಆರಂಭಗೊಂಡ ರೂಪಾಯಿ ನಂತರ ಚೇತರಿಸಿಕೊಂಡು 89.17ಕ್ಕೆ ತಲುಪಿದ್ದು, ತನ್ಮೂಲಕ ತನ್ನ ಹಿಂದಿನ ಮುಕ್ತಾಯಕ್ಕಿಂತ 49 ಪೈಸೆ ಏರಿಕೆಯನ್ನು ದಾಖಲಿಸಿದೆ. ಶುಕ್ರವಾರ ರೂಪಾಯಿ ಡಾಲರ್ ನೆದುರು 98 ಪೈಸೆಗಳಷ್ಟು ನಾಟಕೀಯ ಕುಸಿತವನ್ನು ದಾಖಲಿಸಿತ್ತು ಮತ್ತು 89.66ರ ಸಾರ್ವಕಾಲಿಕ ಕನಿಷ್ಠ ಮಟ್ಟದೊಂದಿಗೆ ದಿನದಾಟವನ್ನು ಮುಗಿಸಿತ್ತು. ದೇಶಿಯ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ಗೆ ಬಲವಾದ ಬೇಡಿಕೆ, ಸ್ಥಳೀಯ ಮತ್ತು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಭಾರೀ ಮಾರಾಟದ ಒತ್ತಡ ಹಾಗೂ ಜಾಗತಿಕ ವ್ಯಾಪಾರಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದ ಮುಂದುವರಿದಿರುವ ಅನಿಶ್ಚಿತತೆಗಳು ರೂಪಾಯಿ ಕುಸಿತಕ್ಕೆ ಕಾರಣ ಎನ್ನಲಾಗಿದೆ.
ಎಕ್ಸ್ ಪೋಸ್ಟ್ ನಲ್ಲಿ ಸರಕಾರವನ್ನು ಟೀಕಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ಅವರು, ರೂಪಾಯಿ ನಿರಂತರವಾಗಿ ಕುಸಿಯುತ್ತಿದ್ದು, ಡಾಲರ್ ನೆದರು 90ರ ಗಡಿಯನ್ನು ದಾಟುವ ಅಂಚಿನಲ್ಲಿದೆ ಎಂದು ಹೇಳಿದ್ದಾರೆ. ಮೋದಿಯವರು ಜುಲೈ 2013ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರೂಪಾಯಿ ಮೌಲ್ಯವನ್ನು ರಕ್ಷಿಸುವಲ್ಲಿ ವೈಫಲ್ಯಕ್ಕಾಗಿ ಯುಪಿಎ ಸರಕಾರವನ್ನು ಅಣಕಿಸಿದ್ದು ಅವರಿಗೆ ನೆನಪಿದೆಯೇ ಎಂದು ಪ್ರಶ್ನಿಸಿದ್ದಾರೆ.
ಆ ಅವಧಿಯ ಹಳೆಯ ವೀಡಿಯೊ ತುಣುಕೊಂದನ್ನು ಹಂಚಿಕೊಂಡಿರುವ ರಮೇಶ್,‘ರೂಪಾಯಿ ಎಷ್ಟು ವೇಗವಾಗಿ ಕುಸಿಯುತ್ತಿದೆ ನೋಡಿ. ಕೆಲವೊಮ್ಮೆ ರೂಪಾಯಿ ಮತ್ತು ದಿಲ್ಲಿಯಲ್ಲಿನ ಸರಕಾರದ ನಡುವೆ ಯಾರ ಘನತೆ ವೇಗವಾಗಿ ಕುಸಿಯುತ್ತದೆ ಎಂಬ ಬಗ್ಗೆ ಸ್ಪರ್ಧೆ ನಡೆಯುತ್ತಿರುವಂತೆ ಕಂಡು ಬರುತ್ತದೆ’ ಎಂಬ ಮೋದಿ ಹೇಳಿಕೆಯನ್ನು ಎತ್ತಿ ತೋರಿಸಿದ್ದಾರೆ.
ರೂಪಾಯಿ ಶುಕ್ರವಾರ ಮೂರು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಡಾಲರ್ ನೆದುರು ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿತ್ತು. ಹೋಲಿಸಬಹುದಾದ ಕೊನೆಯ ಕುಸಿತ ಫೆ.24,2022ರಲ್ಲಿ ಉಂಟಾಗಿತ್ತು, ಆಗ ರೂಪಾಯಿ ಡಾಲರ್ ವಿರುದ್ಧ 99 ಪೈಸೆಗಳಷ್ಟು ಪತನಗೊಂಡಿತ್ತು.