2025ರ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳ ʼವಸೂಲಿಯಾಗದ ಸಾಲʼಗಳಲ್ಲಿ ತೀವ್ರ ಏರಿಕೆ : ವರದಿ
ಹೊಸದಿಲ್ಲಿ: ಕಳೆದ ಹಣಕಾಸು ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳ ʼವಸೂಲಿಯಾಗದ ಸಾಲʼ(ರೈಟ್ ಆಫ್)ಗಳಲ್ಲಿ ತೀವ್ರ ಏರಿಕೆಯಾಗಿರುವುದು ಕಂಡು ಬಂದಿದೆ ಎಂದು thewire ವರದಿ ಮಾಡಿದೆ.
ಭಾರತದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ʼವಸೂಲಿಯಾಗದ ಸಾಲʼದ ಪ್ರಮಾಣ 2024ರ ಹಣಕಾಸು ವರ್ಷದಲ್ಲಿ 17,645 ಕೋಟಿ ರೂ.ಗಳಷ್ಟಿತ್ತು. 2025ರ ಹಣಕಾಸು ವರ್ಷದಲ್ಲಿ ಇದು 26,542 ಕೋಟಿ ರೂ.ಗೆ ಹೆಚ್ಚಳವಾಗಿದೆ.
ICICI ಬ್ಯಾಂಕ್ ʼವಸೂಲಿಯಾಗದ ಸಾಲʼದ ಪ್ರಮಾಣ 2024ರ ಹಣಕಾಸು ವರ್ಷದಲ್ಲಿ 6,091 ಕೋಟಿ ರೂ. ಇತ್ತು. ಇದು 2025ರ ಹಣಕಾಸು ವರ್ಷದಲ್ಲಿ 9,271 ಕೋಟಿ ರೂ.ಗೆ ಹೆಚ್ಚಳವಾಗಿದೆ. Axis ಬ್ಯಾಂಕಿನ ಒಟ್ಟಾರೆ ʼವಸೂಲಿಯಾಗದ ಸಾಲʼ 11,833 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇದು 2024ರ ಹಣಕಾಸು ವರ್ಷದಲ್ಲಿ 8,865 ಕೋಟಿ ರೂ.ಗಳಷ್ಟಿತ್ತು.
ಸಣ್ಣ ಮೌಲ್ಯದ ಸಾಲಗಳನ್ನುʼವಸೂಲಿಯಾಗದ ಸಾಲʼ ಎಂದು ಪರಿಗಣಿಸಲಾಗುತ್ತದೆ. ನಾವು ನಿಯಮಿತವಾಗಿ ಲೆಕ್ಕಪತ್ರ ನಿರ್ವಹಿಸುತ್ತೇವೆ. ಎಸ್ಎಂಇ ಮತ್ತು ಕೃಷಿಯಲ್ಲಿನ ಸಣ್ಣ ಮೌಲ್ಯದ ಸಾಲಗಳು ಹೆಚ್ಚಾಗಿ ʼವಸೂಲಿಯಾಗದ ಸಾಲʼಗಳ ವ್ಯಾಪ್ತಿಗೆ ಬರುತ್ತದೆ ಎಂದು ಎಸ್‌ಬಿಐ ಅಧ್ಯಕ್ಷ ಸಿ.ಎಸ್. ಶೆಟ್ಟಿ ಹೇಳಿದ್ದಾರೆ.
ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಆರ್‌ಬಿಐನ ʼಹಣಕಾಸು ಸ್ಥಿರತೆ ವರದಿʼ(Financial Stability Report)ಯು ವಸೂಲಿಯಾಗದ ಸಾಲಗಳಲ್ಲಿ ತೀವ್ರ ಹಚ್ಚಳವನ್ನು ಉಲ್ಲೇಖಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ವಸೂಲಿಯಾಗದ ಸಾಲಗಳಲ್ಲಿ ಹೆಚ್ಚಳ ಕಳವಳಕಾರಿಯಾಗಿದೆ. ಕಳೆದ ವರ್ಷ ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ್ ಚೌಧರಿ ನೀಡಿದ ಲಿಖಿತ ಉತ್ತರದಲ್ಲಿ 12 ಸಾರ್ವಜನಿಕ ವಲಯದ ಬ್ಯಾಂಕುಗಳ ವಸೂಲಿಯಾಗದ ಸಾಲಗಳ ಮೊತ್ತ ಸುಮಾರು 7 ಲಕ್ಷ ಕೋಟಿ ರೂ. (ನಿಖರವಾಗಿ ಹೇಳುವುದಾದರೆ 6.98 ಲಕ್ಷ ಕೋಟಿ ರೂ.) ಎಂದು ಹೇಳಿದ್ದರು.
ವಸೂಲಿಯಾಗದ ಸಾಲಗಳು ಸಾರ್ವಜನಿಕರ ಹಣವಾಗಿದೆ. ದೊಡ್ಡ ಕಾರ್ಪೊರೇಟ್‌ಗಳ ಸಾಲಗಳ ರೈಟ್-ಆಫ್‌ಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ. ಸಣ್ಣ ಸಾಲಗಾರರು, ರೈತರು ಸೇರಿದಂತೆ ಸಣ್ಣ ರೈಟ್-ಆಫ್‌ಗಳು ಮಾತ್ರ ಬಹಿರಂಗಗೊಂಡಿವೆ ಎಂದು ವರದಿಯು ಉಲ್ಲೇಖಿಸಿದೆ.