ಆ್ಯಕ್ಸಿಯಮ್ 4 ಮಿಷನ್ | ಉಡ್ಡಯನದ ನೇರಪ್ರಸಾರ ವೀಕ್ಷಿಸಿದ ಶುಭಾಂಶು ಹೆತ್ತವರು
PC: PTI
ಲಕ್ನೋ: ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾರನ್ನು ಒಳಗೊಂಡ ಆ್ಯಕ್ಸಿಯಮ್ 4 ಮಿಶನ್‌ನ ಉಡಾವಣೆಯ ನೇರಪ್ರಸಾರವನ್ನು ನೋಡುವ ವ್ಯವಸ್ಥೆಯನ್ನು ಲಕ್ನೋದ ಕಾನ್ಪುರ ರಸ್ತೆಯಲ್ಲಿರುವ ವರ್ಲ್ಡ್ ಯುಟಿಲಿಟಿ ಕನ್ವೆನ್ಶನ್ ಸೆಂಟರ್‌ನ ಸಭಾಭವನದಲ್ಲಿ ಬುಧವಾರ ಮಾಡಲಾಗಿತ್ತು.
ಶುಭಾಂಶುರ ಹೆತ್ತವರು, ಸಹೋದರಿಯರು, ಹಿರಿಯ ರಕ್ಷಣಾ ಸಿಬ್ಬಂದಿ, ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ನಗರದ ಪ್ರಮುಖರು ನೇರಪ್ರಸಾರವನ್ನು ವೀಕ್ಷಿಸಿದರು.
ಬಾಹ್ಯಾಕಾಶ ನೌಕೆಯನ್ನು ಹೊತ್ತ ಫಾಲ್ಕನ್ 9 ರಾಕೆಟ್ ಮೇಲಕ್ಕೆ ಚಿಮ್ಮುತ್ತಿರುವಂತೆಯೇ ಪ್ರೇಕ್ಷಕರು ಹರ್ಷೋದ್ಗಾರದೊಂದಿಗೆ ಕರತಾಡನಗೈದರು. ಕೆಲವರು ಭಾಂಗ್ರಾ ನೃತ್ಯವನ್ನೂ ಮಾಡಿದರು.
ಈ ಸಂದರ್ಭದಲ್ಲಿ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಶುಭಾಂಶು ತಂದೆ ಶಂಭು ಶುಕ್ಲಾ, ‘‘ಇದು ಕೇವಲ ನಮಗೆ ಮಾತ್ರವಲ್ಲ, ಇಡೀ ದೇಶಕ್ಕೆ ಶ್ರೇಷ್ಠ ಕ್ಷಣವಾಗಿದೆ. ಈ ಕ್ಷಣದಲ್ಲಿ ಏನು ಹೇಳಬೇಕೆಂದೇ ನನಗೆ ಗೊತ್ತಾಗುತ್ತಿಲ್ಲ, ನನಗೆ ಪದಗಳು ಸಿಗುತ್ತಿಲ್ಲ. ನನ್ನ ಮಗನಿಗೆ ಯಾವತ್ತೂ ನನ್ನ ಆಶೀರ್ವಾದವಿದೆ’’ ಎಂದು ಭಾವುಕರಾಗಿ ನುಡಿದರು.
ತಾಯಿ ಆಶಾ ಶುಕ್ಲಾ ಮಾತನಾಡುತ್ತಾ, ‘‘ನನ್ನ ಮಗ ಯಶಸ್ವಿಯಾಗುತ್ತಾನೆ ಎನ್ನುವುದು ನನಗೆ ಗೊತ್ತಿದೆ. ಯೋಜನೆಯನ್ನು ಯಶಸ್ವಿಯಾಗಿ ಮುಗಿಸಿ ಭೂಮಿಗೆ ಮರಳುವುದನ್ನು ನಾನು ಕಾಯುತ್ತಿದ್ದೇನೆ. ಅವನು ಭೂಮಿಗೆ ಮರಳಿದ ಬಳಿಕವೂ, ನಮ್ಮಲ್ಲಿಗೆ ಬರಲು ಸ್ವಲ್ಪ ಸಮಯ ಬೇಕಾಗುತ್ತದೆ ಎನ್ನುವುದೂ ನನಗೆ ಗೊತ್ತಿದೆ. ಈ ಸಂದರ್ಭದಲ್ಲಿ ಹೆಚ್ಚೇನೂ ನಾನು ಹೇಳುವುದಿಲ್ಲ. ನನಗೆ ಸಂತೋಷವಾಗಿದೆ’’ ಎಂದರು.