ಆರನೇ ಹಂತದ ಲೋಕಸಭಾ ಚುನಾವಣೆ | ಶೇ. 57.7 ಮತದಾನ

Update: 2024-05-25 16:07 GMT

PC : PTI 


ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಆರನೇ ಹಂತದ ಮತದಾನ ಶನಿವಾರ ನಡೆದಿದ್ದು, ಶೇ.59.98ರಷ್ಟು ಮತದಾನವಾಗಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 58 ಕ್ಷೇತ್ರಗಳಿಗೆ ಮತದಾನ ನಡೆಯಿತು. ಕೆಲವೊಂದು ಅಹಿತರ ಘಟನೆಗಳನ್ನು ಹೊರತುಪಡಿಸಿದಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳದ ಈಸ್ಟ್ ಮಿಡ್ನಾಪುರ ಜಿಲ್ಲೆಯ ಜಾರ್‌ಗ್ರಾಮ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪ್ರಣತ್ ಟುಡು ಅವರು ಮತಗಟ್ಟೆಯೊಂದಕ್ಕೆ ಭೇಟಿ ನೀಡಿದ ಸಂದರ್ಭ ಅವರ ಮೇಲೆ ಟಿಎಂಸಿ ಕಾರ್ಯಕರ್ತರ ಗುಂಪೊಂದು ಕಲ್ಲೆಸೆದು ದಾಳಿ ನಡೆಸಿದ್ದು, ಅವರ ಕಾರಿಗೆ ಹಾನಿ ಮಾಡಿದೆ. ಅವರ ಭದ್ರತಾ ಸಿಬ್ಬಂದಿ ತಕ್ಷಣವೇ ಕಾರ್ಯಾಚರಿಸಿ ಅವರನ್ನು ಸುರಕ್ಷಿತವಾಗಿ ಸ್ಥಳದಿಂದ ತೆರವುಗೊಳಿಸಿದರು.

ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಮತದಾನವಾಗಿದ್ದು, ಶೇ.78ಕ್ಕೂ ಅಧಿಕ ಮಂದಿ ಮತಚಲಾಯಿಸಿದ್ದಾರೆ. ಆದರೆ ಬಿಹಾರ ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ ಮಂದಗತಿಯ ಮತದಾನವಾಗಿದ್ದು ಕ್ರಮವಾಗಿ 53.19 ಶೇ. ಹಾಗೂ 54.03 ಶೇ.ಮತದಾನವಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ. ದಿಲ್ಲಿ ಹಾಗೂ ಹರ್ಯಾಣದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ಪೂರ್ಣಗೊಂಡಿದೆ.

ದಿಲ್ಲಿಲ್ಲಿ ಶೇ.54.37 ಮತದಾನವಾಗಿದ್ದು, ಹರ್ಯಾಣದಲ್ಲಿ ಶೇ.58.24 ಶೇ., ಒಡಿಶಾ 59.92 ಶೇ. ಹಾಗೂ ಜಾರ್ಖಂಡ್‌ನಲ್ಲಿ 62.66 ಶೇ. ಮಂದಿ ಹಕ್ಕು ಚಲಾಯಿಸಿದ್ದಾರೆ.

ಜಮ್ಮು ಕಾಶ್ಮೀರದ ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದಲ್ಲಿ ಶೇ.51ರಷ್ಟು ಮತದಾನ ನಡೆದಿದ್ದು, 1989ರಲ್ಲಿ ಕಾಶ್ಮೀರದಲ್ಲಿ ಉಗ್ರವಾದ ತಲೆಯೆತ್ತಿದ ಬಳಿಕ ಆಗಿರುವ ಗರಿಷ್ಠ ಪ್ರಮಾಣದ ಮತದಾನ ಇದಾಗಿದೆ.

ತನ್ನ ಪಕ್ಷದ ಹಲವಾರು ಕಾರ್ಯರ್ತರನ್ನು ಮತದಾನ ಮಾಡದಂತೆ ತಡೆಯಲು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ವರು ತನ್ನ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ಅವರ ಪುತ್ರ, ಸಂಸದ ರಾಹುಲ್‌ಗಾಂಧಿ ಇಂದು ಮತದಾನದಲ್ಲಿ ಪಾಲ್ಗೊಂಡ ಪ್ರಮುಖರು.

ವೈಶಾಲಿ, ಪೂರ್ವಿಚಂಪಾರಣ್ ಸೇರಿದಂತೆ ಬಿಹಾರದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದ್ದು, 1.49 ಕೋಟಿ ಅರ್ಹ ಮತದಾರರ ಪೈಕಿ ಶೇ.52.80ರಷ್ಚು ಮಂದಿ ಮತದಾನ ಮಾಡಿದ್ದಾರೆ.

ಬಿಹಾರ ಹಾಗೂ ಬಂಗಾದ ತಲಾ ಐದು, ದಿಲ್ಲಿ ಏಳು, ಹರ್ಯಾಣದ 10, ಉತ್ತರಪ್ರದೇಶದ 14, ಒಡಿಶಾದ ಆರು, ಜಾರ್ಖಂಡ್‌ನ ನಾಲ್ಕು ಹಾಗೂ ಜಮ್ಮುಕಾಶ್ಮೀರದ ಒಂದು ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ.

ವಿಧಾನಸಭಾ ಚುನಾವಣೆಯನ್ನು ಕೂಡಾ ಎದುರಿಸುತ್ತಿರುವ ಒಡಿಶಾದಲ್ಲಿ 42 ಅಸೆಂಬ್ಲಿ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಿತು.

ಆರನೇ ಹಂತದ ಚುನಾವಣೆ ಮುಕ್ತಾಯದೊಂದಿಗೆ 543 ಲೋಸಭಾ ಕ್ಷೇತ್ರಗಳ ಪೈಕಿ 486 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಂತಾಗಿದೆ. ಕೊನೆಯ ಹಂತದ ಲೋಕಸಭಾ ಚುನಾವಣೆ ಜೂನ್ 1ರಂದು ನಡೆಯಲಿದೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (ಸಂಬಲ್‌ಪುರ), ಮನೋಹರಲಾಲ್ ಖಟ್ಟರ್ (ಕರ್ನಾಲ್) ಸಂಬಿತ್ ಪಾತ್ರ (ಪುರಿ), ಮನೇಕಾ ಗಾಂದಿ (ಸುಲ್ತಾನ್‌ಪುರ), ದಿವಂಗತ ಕೇಂದರ ಸಚಿವೆ ಬಾನ್ಸುರಿ ಸ್ವರಾಜ್ (ಹೊಸದಿಲ್ಲಿ), ಮನೋಜ್ ತಿವಾರಿ (ಈಶಾನ್ಯ ದಿಲ್ಲಿ) ಹಾಗೂ ಉದ್ಯಮಿ ನವೀನ್ ಜಿಂದಾಲ್ (ಕುರುಕ್ಷೇತ್ರ) ಆರನೇ ಹಂತದ ಚುನಾವಣೆಯ ಬಿಜೆಪಿಯ ಪ್ರಮುಖ ಅಭ್ಯರ್ಥಿಗಳು.

ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ , ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ (ಆನಂತನಾಗ್), ಕಾಂಗ್ರೆಸ್‌ನ ರಾಜ್‌ಬಬ್ಬರ್ (ಗುರ್ಗಾಂವ್),ಜೆಎನ್‌ಯು ಮಾಜಿ ಅಧ್ಯಕ್ಶ ಕನ್ಙಯ್ಯಾ ಕುಮಾರ್ (ಈಶಾನ್ಯ ದಿಲ್ಲಿ) ಕಣದಲ್ಲಿದ್ದ ಪ್ರಮುಖ ಪ್ರತಿಪಕ್ಷ ಅಭ್ಯರ್ಥಿಗಳಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News