ಬಿಹಾರ ಎಸ್ಐಆರ್ ವಿರುದ್ಧ ಸೋನಿಯಾ, ಪ್ರತಿಪಕ್ಷದ ನಾಯಕರಿಂದ ಪ್ರತಿಭಟನೆ
Photo Credit: RAHUL SINGH/ANI
ಹೊಸದಿಲ್ಲಿ, ಜು. 30: ಚುನಾವಣಾ ಆಯೋಗ ಬಿಹಾರದಲ್ಲಿ ನಡೆಸುತ್ತಿರುವ ಮತದಾರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಹಾಗೂ ಅದನ್ನು ಹಿಂಪಡೆಯುವಂತೆ ಆಗ್ರಹಿಸಿ ಕಾಂಗ್ರೆಸ್ ನ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಹಲವು ಸಂಸದರು ಸಂಸತ್ ಭವನದ ಆವರಣದಲ್ಲಿ ನಿರಂತರ 7ನೇ ದಿನವಾದ ಬುಧವಾರ ಕೂಡ ಪ್ರತಿಭಟನೆ ನಡೆಸಿದ್ದಾರೆ.
ಸಂಸತ್ತಿನಲ್ಲಿ ದಿನದ ಕಲಾಪಕ್ಕಿಂತ ಮುನ್ನ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಇತರ ಪ್ರತಿಪಕ್ಷಗಳ ಸಂಸದರು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಸುತ್ತಿರುವುದರ ವಿರುದ್ಧ ಘೋಷಣೆಗಳನ್ನು ಕೂಗಿದರು ಹಾಗೂ ಪ್ರತಿಭಟನೆ ನಡೆಸಿದರು.
ಅವರ ಮುಂದೆ ‘ಎಸ್ಐಆರ್- ಲೋಕತಂತ್ರ ಪೆ ವಾರ್’ ಎಂದು ಬರೆದ ಬ್ಯಾನರ್ ಇತ್ತು. ಅವರು ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಸಮೀಪ ಸಾಲಾಗಿ ನಿಂತು ನಿರಂತರ 7ನೇ ದಿನವಾದ ಇಂದು ಕೂಡ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷ, ಆರ್ಜೆಡಿ, ಎಡರಂಗ ಪಕ್ಷಗಳ ಸಂಸದರು ಸೇರಿದಂತೆ ಪ್ರತಿಪಕ್ಷದ ಹಲವು ಸಂಸದರು ‘ಸ್ಟಾಪ್ ಎಸ್ಐಆರ್’ ಎಂಬ ಬ್ಯಾನರ್ ಹಿಡಿದುಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಘೋಷಣೆಗಳನ್ನು ಕೂಗಿದರು.
ವಿಧಾನ ಸಭೆ ಚುನಾವಣೆಗೆ ಮುನ್ನ ಬಿಹಾರದಲ್ಲಿ ಮತದಾರರನ್ನು ಹಕ್ಕು ಚಲಾಯಿಸದಂತೆ ತಡೆಯುವ ಉದ್ದೇಶವನ್ನು ಚುನಾವಣಾ ಆಯೋಗ ಹೊಂದಿತ್ತು ಎಂದು ಆರೋಪಿಸಿ ಪ್ರತಿಪಕ್ಷ ಎಸ್ಐಆರ್ ವಿರುದ್ಧ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಉಭಯ ಸದನಗಳಲ್ಲಿ ಈ ವಿಷಯದ ಕುರಿತಂತೆ ಚರ್ಚೆ ನಡೆಸುವಂತೆ ಅವರು ಆಗ್ರಹಿಸುತ್ತಿದ್ದಾರೆ.