ತಪ್ಪು ಟಿಕೆಟ್ ವಿತರಣೆ: 25,000 ರೂ. ಪರಿಹಾರ ವಿತರಿಸುವಂತೆ ಸ್ಪೈಸ್ ಜೆಟ್ ಸಂಸ್ಥೆಗೆ ಆದೇಶ
PC : @flyspicejet
ಮುಂಬೈ: 2020ರಲ್ಲಿ ಸ್ಪೈಸ್ ಜೆಟ್ ವಿಮಾನದಲ್ಲಿ ಮರು ಪ್ರಯಾಣ ಬೆಳೆಸಿದ್ದ ಹಿರಿಯ ನಾಗರಿಕರೊಬ್ಬರಿಗೆ ತಪ್ಪು ಟಿಕೆಟ್ ವಿತರಣೆ ಮಾಡಿ, ಅವರಿಗೆ ಮಾನಸಿಕ ಹಾಗೂ ಆರ್ಥಿಕ ನಷ್ಟವುಂಟು ಮಾಡಲಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಗ್ರಾಹಕ ನ್ಯಾಯಾಲಯವೊಂದು, ಸಂತ್ರಸ್ತ ಪ್ರಯಾಣಿಕರಿಗೆ 25,000 ರೂ. ಪರಿಹಾರ ವಿತರಿಸುವಂತೆ ಸ್ಪೈಸ್ ಜೆಟ್ ವಿಮಾನ ಯಾನ ಸಂಸ್ಥೆಗೆ ಆದೇಶಿಸಿದೆ.
ಅಗ್ಗದ ದರದ ವಿಮಾನ ಯಾನ ಸಂಸ್ಥೆಯಾದ ಸ್ಪೈಸ್ ಜೆಟ್, ತನ್ನ ನ್ಯೂನತೆಯುಳ್ಳ ಸೇವೆ ಹಾಗೂ ನಿರ್ಲಕ್ಷ್ಯದ ವರ್ತನೆಯಿಂದ ಪ್ರಯಾಣಿಕರಿಗೆ ಮಾನಸಿಕ ಕಿರುಕುಳ ನೀಡಿದೆ ಎಂದು ತನ್ನ ಜೂನ್ 17ರ ಆದೇಶದಲ್ಲಿ ಮುಂಬೈ ಉಪನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹೇಳಿದೆ.
ಪ್ರಯಾಣಿಕರ ತುರ್ತು ಅಗತ್ಯದ ಕಾರಣಕ್ಕೆ (ವಯಸ್ಸನ್ನು ಆದೇಶದಲ್ಲಿ ನಮೂದಿಸಲಾಗಿಲ್ಲ) ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಆರಂಭಿಕ ವಿಮಾನ ಹಾರಾಟ ರದ್ದುಗೊಂಡಿದ್ದರಿಂದ, ಅವರಿಗೆ ಪರ್ಯಾಯ ಮುಂಗಡ ಕಾಯ್ದಿರಿಸುವಿಕೆಯ ವೇಳೆ ತಪ್ಪು ಟಿಕೆಟ್ ಅನ್ನು ವಿತರಿಸಲಾಗಿತ್ತು ಎಂದು ಹೇಳಲಾಗಿದೆ.
ಆದರೆ, ವಿಮಾನ ಹಾರಾಟ ರದ್ದತಿಯು ವಿಮಾನ ಯಾನ ಸಂಸ್ಥೆಯ ನಿಯಂತ್ರಣದಲ್ಲಿರಲಿಲ್ಲ ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಾಯು ಸಂಚಾರ ನಿಯಂತ್ರಕರು ಈ ನಿರ್ಧಾರ ಕೈಗೊಂಡಿದ್ದರು ಎಂಬ ವಾದವನ್ನು ಆಯೋಗ ಮಾನ್ಯ ಮಾಡಿದೆ.
ದೂರುದಾರರಿಗೆ ಪರ್ಯಾಯ ಟಿಕೆಟ್ ಒದಗಿಸಲು ವಿಮಾನ ಯಾನ ಸಂಸ್ಥೆ ಎಲ್ಲ ಅಗತ್ಯ ಪ್ರಯತ್ನಗಳನ್ನು ಕೈಗೊಂಡಿದೆ ಎಂಬುದನ್ನೂ ಪರಿಗಣನೆಗೆ ತೆಗೆದುಕೊಂಡ ಆಯೋಗ. ಆದರೆ, ಹೀಗೆ ವಿತರಿಸಲಾದ ಟಿಕೆಟ್ ತಪ್ಪಾಗಿತ್ತು ಹಾಗೂ ಅದರಿಂದಾಗಿ ದೂರುದಾರರಿಗೆ ಆರ್ಥಿಕ ಹಾಗೂ ಮಾನಸಿಕ ಸಮಸ್ಯೆಯುಂಟಾಗಿದೆ ಎಂದು ತನ್ನ ಆದೇಶದಲ್ಲಿ ಅಭಿಪ್ರಾಯ ಪಟ್ಟಿದೆ.