ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡಿನ 47 ಬೆಸ್ತರ ಬಂಧನ
ಸಾಂದರ್ಭಿಕ ಚಿತ್ರ
ರಾಮನಾಥಪುರಂ,ಅ.9: ಬುಧವಾರ ತಡರಾತ್ರಿ ಮೀನುಗಾರಿಕೆಯ ಸಂದರ್ಭ ಶ್ರೀಲಂಕಾದ ಸಮುದ್ರ ಪ್ರದೇಶವನ್ನು ದಾಟಿದ ಆರೋಪದಲ್ಲಿ ರಾಮೇಶ್ವರಂ ಹಾಗೂ ಕಾರೈಕಲ್‌ನ 47 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದ್ದು, ಅವರಿದ್ದ ನಾಲ್ಕು ಯಾಂತ್ರೀಕೃತ ದೋಣಿಗಳನ್ನು ವಶಪಡಿಸಿಕೊಂಡಿದೆ.
ಬುಧವಾರ ಬೆಳಗ್ಗೆ ರಾಮೇಶ್ವರ್‌ನಿಂದ 339 ಯಾಂತ್ರಿಕೃತ ಮೀನುಗಾರಿಕಾ ದೋಣಿಗಳು ಮೀನಗಾರಿಕೆಗಾಗಿ ಸಾಗರಕ್ಕೆ ತೆರಳಿದ್ದವು. ಅವುಗಳ ಪೈಕಿ ನಾಲ್ಕು ಮೀನುಗಾರಿಕಾ ದೋಣಿಗಳನ್ನು ಹಾಗೂ ಅವುಗಳಲ್ಲಿದ್ದ ಒಟ್ಟು 30 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ ಎಂದು ರಾಮೇಶ್ವರಂನ ಮೀನುಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರೈಕಲ್‌ನಿಂದ 17 ಮೀನುಗಾರರನ್ನು ಒಯ್ಯುತ್ತಿದ್ದ ಇನ್ನೊಂದು ಮೀನುಗಾರಿಕಾ ದೋಣಿಯನ್ನು ಶ್ರೀಲಂಕಾ ನೌಕಾಪಡೆಯ ಯೋಧರು ಗುರುವಾರ ಬೆಳಗ್ಗೆ ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಮೀನುಗಾರರನ್ನು ಧನುಷ್ಕೋಡಿ ಹಾಗೂ ತಲೈಮನ್ನಾರ್ ನಡುವೆ ಇರುವ ಸಮುದ್ರ ಪ್ರದೇಶದಲ್ಲಿ ಬಂಧಿಸಲಾಗಿದೆಯೆಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.
ಬಂಧಿತ ಮೀನುಗಾರರು ಹಾಗೂ ಅವರ ದೋಣಿಗಳನ್ನು ಮನ್ನಾರ್‌ನ ನೌಕಾನೆಲೆಗೆ ಕೊಂಡೊಯ್ಯಲಾಗಿದೆ. ಬಂಧಿತ ಮೀನುಗಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಶ್ರೀಲಂಕಾದ ವಾವುನಿಯಾ ಕಾರಾಗೃಹದಲ್ಲಿರಿಸಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.