ಮರು ಅಂಗೀಕರಿಸಿದ ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲು ಹೇಗೆ ಸಾಧ್ಯ?: ತಮಿಳುನಾಡು ರಾಜ್ಯಪಾಲರ ಮೌನದ ಕುರಿತು ಚಾಟಿ ಬೀಸಿದ ಸುಪ್ರೀಂ ಕೋರ್ಟ್
ಆರ್.ಎನ್.ರವಿ | PTI
ಹೊಸದಿಲ್ಲಿ: ವಿಧಾನಸಭೆಯು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕದೆ ತಡೆಹಿಡಿಯುವುದಕ್ಕೂ ಮುನ್ನ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಪ್ರದರ್ಶಿಸಿದ ಮೌನವನ್ನು ಸೋಮವಾರ ಪ್ರಶ್ನಿಸಿದ ಸುಪ್ರೀಂ ಕೋರ್ಟ್, “ಮರು ಅಂಗೀಕರಿಸಿದ ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲು ಹೇಗೆ ಸಾಧ್ಯ?” ಎಂದು ತರಾಟೆಗೆ ತೆಗೆದುಕೊಂಡಿತು.
ತಮಿಳುನಾಡು ರಾಜ್ಯಪಾಲರನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿಗೆ ಹಲವು ಪ್ರಶ್ನೆಗಳನ್ನು ಕೇಳಿದ ನ್ಯಾ. ಜೆ.ಬಿ.ಪಾರ್ದಿವಾಲಾ ಹಾಗೂ ನ್ಯಾ. ಆರ್.ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠ, ಈ ವ್ಯಾಜ್ಯದ ಕುರಿತು ತನ್ನ ತೀರ್ಪನ್ನು ಕಾಯ್ದಿರಿಸಿತು.
“ರಾಜ್ಯಪಾಲರೇಕೆ ವರ್ಷಗಟ್ಟಲೆ ಮೌನವಾಗಿದ್ದರು? ಅವರೇಕೆ ರಾಜ್ಯ ಸರಕಾರದೊಂದಿಗೆ ಸಂವಹನ ನಡೆಸಲಿಲ್ಲ? ನಂತರ ತಮ್ಮ ಅಂಕಿತವನ್ನು ತಡೆಹಿಡಿದಿರುವ ಅವರು, ರಾಷ್ಟ್ರಪತಿಗಳ ಪರಿಗಣನೆಗಾಗಿ ಮಸೂದೆಗಳನ್ನು ಕಾಯ್ದಿರಿಸಿದ್ದಾರೆ” ಎಂದು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
“ಮರು ಅಂಗೀಕರಿಸಲಾಗಿರುವ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಹೇಗೆ ಶಿಫಾರಸು ಮಾಡಲು ಸಾಧ್ಯ?” ಎಂದೂ ನ್ಯಾಯಾಲಯ ಪ್ರಶ್ನಿಸಿತು. ಅದಕ್ಕೆ ಪ್ರತಿಯಾಗಿ, ಮರು ಅಂಗೀಕರಿಸಲಾದ ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳಿಸಬಾರದು ಎಂಬ ಯಾವುದೇ ನಿರ್ಬಂಧವನ್ನು ರಾಜ್ಯಪಾಲರಿಗೆ ಸಂವಿಧಾನದ ನಿಬಂಧನೆಯಲ್ಲಿ ವಿಧಿಸಲಾಗಿಲ್ಲ ಎಂದು ವೆಂಕಟರಮಣಿ ವಾದಿಸಿದರು.
ಮಸೂದೆಗಳಿಗೆ ಅಂಕಿತ ಹಾಕಲು ರಾಜ್ಯಪಾಲರು ವಿಳಂಬ ನೀತಿ ಅನುಸರಿಸಿದ್ದರಿಂದ, 2023ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ತಮಿಳುನಾಡು ಸರಕಾರ, 2020ರ ಒಂದು ಮಸೂದೆ ಸೇರಿದಂತೆ 12 ಮಸೂದೆಗಳು ರಾಜ್ಯಪಾಲರ ಬಳಿ ಬಾಕಿ ಇವೆ ಎಂದು ಆರೋಪಿಸಿತ್ತು.
ಹತ್ತು ಮಸೂದೆಗಳ ಅಂಕಿತವನ್ನು ತಡೆ ಹಿಡಿದಿದ್ದೇನೆ ಎಂದು ನವೆಂಬರ್ 13, 2023ರಂದು ರಾಜ್ಯಪಾಲ ಆರ್.ಎನ್.ರವಿ ಘೋಷಿಸಿದ್ದರು. ಹೀಗಾಗಿ ನವೆಂಬರ್ 18, 2023ರಂದು ಅವೇ ಮಸೂದೆಗಳನ್ನು ರಾಜ್ಯ ವಿಧಾನಸಭೆಯಲ್ಲಿ ಮರು ಅಂಗೀಕರಿಸಲಾಗಿತ್ತು.
ಈ ಪೈಕಿ ಕೆಲವು ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗಾಗಿ ನವೆಂಬರ್ 28, 2023ರಂದು ರಾಜ್ಯಪಾಲ ಆರ್.ಎನ್.ರವಿ ಕಾಯ್ದಿರಿಸಿದ್ದರು.
ರಾಜ್ಯಪಾಲ ಆರ್.ಎನ್.ರವಿಯ ಈ ನಡೆಯನ್ನು ಪ್ರತಿಭಟಿಸಿ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು.