×
Ad

ಲಾಟರಿಗಳ ಮೇಲೆ ರಾಜ್ಯಗಳು ಮಾತ್ರ ತೆರಿಗೆ ವಿಧಿಸಬಹುದು; ಕೇಂದ್ರ ಸರಕಾರಕ್ಕೆ ಅಧಿಕಾರವಿಲ್ಲ: ಸುಪ್ರೀಂ ಕೋರ್ಟ್

Update: 2025-02-11 20:13 IST

 ಸುಪ್ರೀಂ ಕೋರ್ಟ್ | PC : PTI 

ಹೊಸದಿಲ್ಲಿ: ಲಾಟರಿ ಟಿಕೆಟ್‌ಗಳ ಮೇಲೆ ರಾಜ್ಯ ಸರಕಾರಗಳು ಮಾತ್ರ ತೆರಿಗೆ ವಿಧಿಸಬಹುದಾಗಿದೆ, ಕೇಂದ್ರ ಸರಕಾರಕ್ಕೆ ಆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಲಾಟರಿಯು ಸಂಪೂರ್ಣವಾಗಿ ರಾಜ್ಯಗಳ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಸಾಂವಿಧಾನಿಕ ವಿಧಿಯನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್‌ಚಂದ್ರ ಶರ್ಮ ಅವರನ್ನೊಳಗೊಂಡ ನ್ಯಾಯಪೀಠವೊಂದು, ಲಾಟರಿ ವಿತರಕರ ಮೇಲೆ ಸೇವಾ ತೆರಿಗೆ ವಿಧಿಸುವ ಕೇಂದ್ರ ಸರಕಾರದ ಪ್ರಯತ್ನಕ್ಕೆ ತಡೆಹಾಕಿತು.

‘‘ಸಂವಿಧಾನದ ರಾಜ್ಯ ಪಟ್ಟಿಯ 62ನೇ ಕ್ರಮಾಂಕದಲ್ಲಿ, ಲಾಟರಿಯನ್ನು ‘ಬೆಟ್ಟಿಂಗ್ ಮತ್ತು ಜೂಜು’’ ವ್ಯಾಪ್ತಿಗೆ ಸೇರಿಸಲಾಗಿದೆ. ಅಂದರೆ, ಅವುಗಳನ್ನು ನಿಯಂತ್ರಿಸಲು ಮತ್ತು ತೆರಿಗೆ ವಿಧಿಸಲು ರಾಜ್ಯ ಶಾಸಕಾಂಗಗಳಿಗೆ ಮಾತ್ರ ಅಧಿಕಾರವಿದೆ’’ ಎಂದು ನ್ಯಾಯಾಲಯ ಹೇಳಿತು.

ಲಾಟರಿಗಳ ವಿತರಣೆ ಮತ್ತು ಮಾರಾಟದಲ್ಲಿ ತೊಡಗಿರುವ ಕಂಪೆನಿಗಳ ಮೇಲೆ ಸೇವಾ ತೆರಿಗೆ ವಿಧಿಸಲು ಕೇಂದ್ರ ಸರಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಲಾಟರಿ ವಿತರಣೆ ಮತ್ತು ಮಾರಾಟ ಚಟುವಟಿಕೆಗಳು ಹಣಕಾಸು ಕಾಯ್ದೆಯಡಿ ತೆರಿಗೆ ವಿಧಿಸಬಹುದಾದ ‘‘ಸೇವೆ’’ಗಳಾಗಿವೆ ಎಂಬುದಾಗಿ ಕೇಂದ್ರ ಸರಕಾರ ವಾದಿಸಿದೆ.

ಲಾಟರಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಸೇವಾ ತೆರಿಗೆಯ ವ್ಯಾಪ್ತಿಯೊಳಗೆ ತರಲು ಹಲವಾರು ವರ್ಷಗಳಲ್ಲಿ ಕೇಂದ್ರ ಸರಕಾರವು ಹಲವು ಪ್ರಯತ್ನಗಳನ್ನು ಮಾಡಿದೆ. ಈ ನಿಟ್ಟಿನಲ್ಲಿ ಅದು 1994, 2010 ಮತ್ತು 2015ರಲ್ಲಿ ಹಣಕಾಸು ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಿದೆ. ಆದರೆ, ಆ ತಿದ್ದುಪಡಿಗಳನ್ನು 2012 ಮತ್ತು 2015ರ ನಡುವಿನ ಅವಧಿಯಲ್ಲಿ ಸಿಕ್ಕಿಮ್ ಹೈಕೋರ್ಟ್ ರದ್ದುಪಡಿಸಿದೆ. ಈಗ ಆ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ.

ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ಗೆ ಹೋಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News