×
Ad

ಇಶಾ ಫೌಂಡೇಶನ್‌ಗೆ ಪಾರಿಸರಿಕ ವಿನಾಯಿತಿ; ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Update: 2025-02-28 20:29 IST

ಸುಪ್ರೀಂ ಕೋರ್ಟ್ | PTI 

ಹೊಸದಿಲ್ಲಿ: ಪಾರಿಸರಿಕ ಅನುಮೋದನೆ ಪಡೆಯದೆ ತನ್ನ ಕೊಯಂಬತ್ತೂರು ಕ್ಯಾಂಪಸ್‌ನಲ್ಲಿ ನಿರ್ಮಾಣ ಕಾಮಗಾರಿ ನಡೆಸಿರುವುದಕ್ಕಾಗಿ ಜಗ್ಗಿ ವಾಸುದೇವ ಅವರ ಇಶಾ ಫೌಂಡೇಶನ್‌ಗೆ ಮದ್ರಾಸ್ ಉಚ್ಛ ನ್ಯಾಯಾಲಯ ಶೋಕಾಸ್ ನೋಟಿಸ್ ರದ್ದುಗೊಳಿಸಿ ನೀಡಿದ ಆದೇಶದ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಮದ್ರಾಸ್ ಉಚ್ಛ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ಎನ್.ಕೆ. ಸಿಂಗ್ ಅವರ ಪೀಠ, ಇಶಾ ಯೋಗ ಹಾಗೂ ಧ್ಯಾನ ಕೇಂದ್ರ ನಿರ್ಮಾಣಕ್ಕೆ ಸಂಬಂಧಿಸಿ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳದಂತೆ ನಿರ್ದೇಶಿಸಿದೆ.

ಆದರೆ, ಅಕ್ರಮ ನಿರ್ಮಾಣಗಳನ್ನು ಸಕ್ರಮಗೊಳಿಸಲು ಈ ಆದೇಶವನ್ನು ಪೂರ್ವ ನಿದರ್ಶನವೆಂದು ಪರಿಗಣಿಸಬಾರದು ಎಂದು ಪೀಠ ಸ್ಪಷ್ಟನೆ ನೀಡಿದೆ.

ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ 2021 ನವೆಂಬರ್ 19ರಂದು ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಪಾರಿಸರಿಕ ಅನುಮೋದನೆ ಪಡೆಯದೆ ಕೋಯಂಬತ್ತೂರು ಜಿಲ್ಲೆಯ ವೆಳ್ಳೈನ್‌ ಗಿರಿಯ ಬೆಟ್ಟದ ತಪ್ಪಲಿನಲ್ಲಿ 2006 ಹಾಗೂ 2014ರ ನಡುವೆ ಹಲವು ಕಟ್ಟಡಗಳನ್ನು ನಿರ್ಮಾಣ ಮಾಡಿದ ಇಶಾ ಪೌಂಡೇಶನ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮಂಡಳಿ ಕೋರಿತ್ತು.

ಮಂಡಳಿ ಈ ನೋಟಿಸ್ ಪ್ರಶ್ನಿಸಿ 2022 ಜನವರಿಯಲ್ಲಿ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿತ್ತು. 2014ರ ಪರಿಸರ ಸಂರಕ್ಷಣಾ ಕಾಯ್ದೆಯ ನಿಯಮಗಳು ಶಿಕ್ಷಣ ಸಂಸ್ಥೆಗಳಿಗೆ ಪೂರ್ವಾನ್ವಯವಾಗುವಂತೆ ವಿನಾಯತಿ ನೀಡಿವೆ ಎಂದು ಅದು ವಾದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News