×
Ad

ಪಟಾಕಿ ನಿಷೇಧ ದಿಲ್ಲಿಗೆ ಮಾತ್ರ ಸೀಮಿತ ಯಾಕೆ? ಸುಪ್ರೀಂಕೋರ್ಟ್ ಪ್ರಶ್ನೆ

ದೇಶಾದ್ಯಂತ ಜನರಿಗೆ ಪರಿಶುದ್ಧ ವಾಯುವನ್ನು ಹೊಂದುವ ಹಕ್ಕಿದೆ: ಸಿಜೆಐ ಬಿ.ಆರ್.ಗವಾಯಿ

Update: 2025-09-12 21:19 IST

   ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಸೆ.12: ದಿಲ್ಲಿ-ಕೇಂದ್ರಾಡಳಿತ ಪ್ರದೇಶವನ್ನು ಮಾತ್ರ ಆಯ್ದುಕೊಂಡು ಪಟಾಕಿಗೆ ನಿಷೇಧ ವಿಧಿಸಿರುವುದರ ಹಿಂದಿನ ಔಚಿತ್ಯವನ್ನು ಸುಪ್ರೀಂಕೋರ್ಟ್ ಗುರುವಾರ ಪ್ರಶ್ನಿಸಿದೆ. ಪರಿಶುದ್ಧ ವಾಯುವನ್ನು ಹೊಂದುವ ಹಕ್ಕು ರಾಷ್ಟ್ರ ರಾಜಧಾನಿಯ ಗಣ್ಯ ವ್ಯಕ್ತಿಗಳಿಗೆ ಮಾತ್ರವೇ ಸೀಮಿತವಲ್ಲ, ಅದನ್ನು ದೇಶಾದ್ಯಂತದ ಪ್ರಜೆಗಳಿಗೂ ವಿಸ್ತರಿಸಬೇಕೆಂದು ನ್ಯಾಯಾಲಯ ಪ್ರತಿಪಾದಿಸಿದೆ.

‘‘ರಾಷ್ಟ್ರರಾಜಧಾನಿ ಪ್ರದೇಶದಲ್ಲಿರುವ ನಗರಗಳ ಜನತೆ ಪರಿಶುದ್ಧ ವಾಯುವನ್ನು ಹೊಂದುವುದಕ್ಕೆ ಅರ್ಹರಾಗಿದ್ದರೆ, ಇತರ ನಗರಗಳ ಜನರು ಅದನ್ನು ಯಾಕೆ ಹೊಂದಬಾರದು?... ಯಾವುದೇ ನೀತಿಯಿರಲಿ, ಅದು ಅಖಿಲಭಾರತ ವ್ಯಾಪ್ತಿಯಲ್ಲಿರಬೇಕಾಗುತ್ತದೆ. ದೇಶದ ಗಣ್ಯ ವ್ಯಕ್ತಿಗಳಿದ್ದಾರೆಂಬ ಕಾರಣಕ್ಕೆ ಯಾವುದೇ ನೀತಿಯು ದಿಲ್ಲಿಗೆ ಮಾತ್ರವೇ ಸೀಮಿತವಾಗಕೂಡದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಹೇಳಿದ್ದಾರೆ.

‘‘ಕಳೆದ ಚಳಿಗಾಲದಲ್ಲಿ ನಾನು ಅಮೃತಸರದಲ್ಲಿದ್ದೆ. ಅಲ್ಲಿ ವಾಯುಮಾಲಿನ್ಯವು ದಿಲ್ಲಿಗಿಂತಲೂ ಕಳಪೆಯಾಗಿತ್ತು. ಒಂದು ವೇಳೆ ಪಟಾಕಿಗಳನ್ನು ನಿಷೇಧಿಸಬೇಕಿದ್ದರೆ, ಅವನ್ನು ದೇಶಾದ್ಯಂತ ನಿಷೇಧಿಸಬೇಕಾಗುತ್ತದೆ’’ ಎಂದು ಸಿಜೆಐ ಪ್ರತಿಪಾದಿಸಿದ್ದಾರೆ.

ಈ ವಿಚಾರವಾಗಿ ವಾಯುಗುಣಮಟ್ಟ ನಿರ್ವಹಣಾ ಆಯೋಗದಿಂದ ವಿಸ್ತೃತವಾದ ವರದಿಯನ್ನು ಪಡೆಯುವಂತೆ ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರಿಗೆ ನ್ಯಾಯಪೀಠ ಸೂಚಿಸಿತು. ಹಸಿರು ಪಟಾಕಿಗಳಿಂದ ಕಡಿಮೆ ಮಾಲಿನ್ಯ ಸಾಧ್ಯತೆಯ ಬಗ್ಗೆ ರಾಷ್ಟ್ರೀಯ ಪರಿಸರ ಏಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್‌ಇಇಆರ್‌ಐ) ಪರಿಶೀಲಿಸುತ್ತಿದೆ ಎಂದು ಜನರಲ್ ಐಶ್ವರ್ಯಾ ಬಾಟಿ ತಿಳಿಸಿದರು.

ಕೆಲವು ಕಕ್ಷಿದಾರರ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ಕೆ. ಪರಮೇಶ್ವರ್ ಅವರು, ಅಧಿಕಾರಿಗಳು ಪಟಾಕಿಗಳ ಬಳಕೆ ನಿರ್ಬಂಧ ಹೇರುವ ಜೊತೆಗೆ ಪಟಾಕಿ ತಯಾರಕರ ಪರವಾನಗಿಗಳನ್ನು ಕೂಡಾ ರದ್ದುಪಡಿಸುತ್ತಿದ್ದಾರೆಂದು ಆರೋಪಿಸಿದರು. ಅಧಿಕಾರಿಗಳಿಂದ ಪಟಾಕಿಗಳಿಗೆ ಪರವಾನಗಿ ನಿಷೇಧ ವಿಚಾರವಾಗಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ನ್ಯಾಯಪೀಠ ಆದೇಶಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News