ನಾಪತ್ತೆಯಾದ ಮಕ್ಕಳ ಪತ್ತೆಗೆ ಆನ್‌ಲೈನ್ ಪೋರ್ಟಲ್ ರೂಪಿಸಿ : ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ, ಸೆ. 24: ನಾಪತ್ತೆಯಾದ ಮಕ್ಕಳ ಪತ್ತೆಗೆ ಹಾಗೂ ಇಂತಹ ಪ್ರಕರಣಗಳ ತನಿಖೆಗೆ ಗೃಹ ಸಚಿವಾಲಯದ ಅಡಿಯಲ್ಲಿ ಆನ್‌ಲೈನ್ ಪೋರ್ಟಲ್ ಆರಂಭಿಸಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಹಾಗೂ ಆರ್. ಮಾಧವನ್ ಅವರ ಪೀಠ, ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಪತ್ತೆಯಾದ ಮಕ್ಕಳನ್ನು ಪತ್ತೆ ಹೆಚ್ಚುವ ಜವಾಬ್ದಾರಿ ಹೊಂದಿರುವ ಪೊಲೀಸ್ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಇದೆ ಎಂದು ಹೇಳಿತು.
ಈ ಪೋರ್ಟಲ್ ಪ್ರತಿ ರಾಜ್ಯದಿಂದ ಒಬ್ಬ ಅಧಿಕಾರಿಯನ್ನು ಹೊಂದಬಹುದು. ಆ ಅಧಿಕಾರಿ ಕಾಣೆಯಾದ ದೂರುಗಳನ್ನು ನಿರ್ವಹಿಸಬಹುದು. ಅಲ್ಲದೆ, ಪೋರ್ಟಲ್ ಮೂಲಕ ಮಾಹಿತಿ ಹಂಚಿಕೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿದೆ.
ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಸಂಘಟಿತ ಪ್ರಯತ್ನ ನಡೆಯಬೇಕು ಹಾಗೂ ಈ ಸಮಸ್ಯೆ ಪರಿಹರಿಸಲು ವಿಶೇಷ ಆನ್‌ಲೈನ್ ಪೋರ್ಟಲ್ ಅನ್ನು ರಚಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಅನಂತರ ಪೀಠ, ಕೇಂದ್ರ ಸರಕಾರದ ಪ್ರತಿಕ್ರಿಯೆ ಕೇಳಿ ನ್ಯಾಯಾಲಯಕ್ಕೆ ತಿಳಿಸುವಂತೆ ಕೇಂದ್ರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರಿಗೆ ತಿಳಿಸಿತು.
ಈ ಹಿಂದೆ ಸುಪ್ರೀಂ ಕೋರ್ಟ್ ಮಕ್ಕಳು ನಾಪತ್ತೆಯಾಗಿರುವ ದತ್ತಾಂಶವನ್ನು ಸಲ್ಲಿಸಲು ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೆನಪಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿತ್ತು.