×
Ad

ರಷ್ಯನ್ ಮಹಿಳೆ ಮಕ್ಕಳೊಂದಿಗೆ ಗುಹೆಯಲ್ಲಿದ್ದಾಗ ನೀವೆಲ್ಲಿದ್ದೀರಿ? : ಇಸ್ರೇಲ್‌ ವ್ಯಕ್ತಿಗೆ ಸುಪ್ರೀಂ ಕೋರ್ಟ್‌ ತರಾಟೆ

Update: 2025-10-06 21:41 IST

 Photo Credit : PTI

ಹೊಸದಿಲ್ಲಿ,ಅ.6: ಕರ್ನಾಟಕದ ಗೋಕರ್ಣದಲ್ಲಿಯ ಗುಹೆಯೊಂದರಲ್ಲಿ ತಮ್ಮ ತಾಯಿಯೊಂದಿಗೆ ವಾಸವಿದ್ದ ಇಬ್ಬರು ರಷ್ಯನ್ ಬಾಲಕಿಯರ ತಂದೆ ತಾನೇ ಎಂದು ಹೇಳಿಕೊಂಡಿರುವ ಇಸ್ರೇಲ್‌ ಪ್ರಜೆಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತೀವ್ರ ತರಾಟೆಗೆತ್ತಿಕೊಂಡಿತು. ನಿಮ್ಮ ಮಕ್ಕಳು ಗುಹೆಯಲ್ಲಿ ವಾಸವಿದ್ದಾಗ ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ನ್ಯಾಯಾಲಯವು, ಈ ದೇಶವು ‘ಸ್ವರ್ಗವಾಗಿಬಿಟ್ಟಿದೆ’ ಮತ್ತು ಯಾರು ಬೇಕಾದರೂ ಇಲ್ಲಿ ಬಂದು ಉಳಿದುಕೊಳ್ಳುತ್ತಾರೆ ಎಂದು ಹೇಳಿತು.

ರಷ್ಯಾ ಪ್ರಜೆ ನೀನಾ ಕುಟಿನಾ ಮತ್ತು ಅವರ ಇಬ್ಬರು ಮಕ್ಕಳು ಜು.11ರಂದು ಗೋಕರ್ಣ ಬಳಿಯ ರಾಮತೀರ್ಥ ಬೆಟ್ಟದ ಗುಹೆಯಲ್ಲಿ ಪತ್ತೆಯಾಗಿದ್ದರು. ಅಧಿಕಾರಿಗಳ ಪ್ರಕಾರ ತಾಯಿಮಕ್ಕಳು ಎರಡು ತಿಂಗಳುಗಳಿಂದಲೂ ಗುಹೆಯಲ್ಲಿ ವಾಸವಿದ್ದರು ಮತ್ತು ಅವರ ಬಳಿ ಯಾವುದೇ ಮಾನ್ಯವಾದ ದಾಖಲೆಗಳಿರಲಿಲ್ಲ.

ಬಳಿಕ ರಷ್ಯನ್ ದೂತಾವಾಸವು ಕುಟಿನಾ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಿಗೆ ತುರ್ತು ಪ್ರಯಾಣ ದಾಖಲೆಗಳನ್ನು ನೀಡಿತ್ತು. ಈ ಹಂತದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ್ದ ಇಸ್ರೇಲಿ ಪ್ರಜೆ ಡ್ರೋರ್ ಶ್ಲೋಮೊ ಗೋಲ್ಡ್‌ಸ್ಟೈನ್ ತಾನು ಮಕ್ಕಳ ತಂದೆ ಎಂದು ಹೇಳಿಕೊಂಡಿದ್ದ ಮತ್ತು ಅವರನ್ನು ತಕ್ಷಣ ಗಡಿಪಾರುಗೊಳಿಸದಂತೆ ಕೇಂದ್ರಕ್ಕೆ ನಿರ್ದೇಶನ ನೀಡಲು ನ್ಯಾಯಾಲಯವನ್ನು ಆಗ್ರಹಿಸಿದ್ದ. ತನ್ನ ಮಕ್ಕಳನ್ನು ಪತ್ತೆ ಹಚ್ಚಲು ವಿಫಲಗೊಂಡ ಬಳಿಕ ಗೋಲ್ಡ್‌ಸ್ಟೈನ್ ಕಳೆದ ವರ್ಷದ ಗೋವಾದ ಪಣಜಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ.

ಗೋಲ್ಡ್‌ಸ್ಟೈನ್ ಅರ್ಜಿಯನ್ನು ತಿರಸ್ಕರಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯವು ರಷ್ಯಾಕ್ಕೆ ಕುಟಿನಾ ಮತ್ತು ಅವರ ಇಬ್ಬರು ಮಕ್ಕಳನ್ನು ವಾಪಸ್ ಕಳುಹಿಸಲು ಕೇಂದ್ರ ಸರಕಾರಕ್ಕೆ ಹಸಿರು ನಿಶಾನೆ ತೋರಿಸಿತ್ತು.

ನಂತರ ಗೋಲ್ಡ್‌ಸ್ಟೈನ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ.

ಸೋಮವಾರ ವಿಚಾರಣೆ ಸಂದರ್ಭ ನ್ಯಾ.ಸೂರ್ಯಕಾಂತ ಮತ್ತು ಜಾಯಮಲ್ಯ ಬಾಗ್ಚಿ ಅವರ ಪೀಠವು, ‘ನಿಮಗೆ ಯಾವ ಹಕ್ಕು ಇದೆ? ನೀವು ಯಾರು ಎಂದು ಪ್ರಶ್ನಿಸಿತು. ಅರ್ಜಿದಾರನ ಪರ ವಕೀಲರು ಅವರು ಮಕ್ಕಳ ತಂದೆ ಎಂದು ತಿಳಿಸಿದಾಗ ಪೀಠವು, ನೀವು ಮಕ್ಕಳ ಘೋಷಿತ ತಂದೆ ಎನ್ನುವುದಕ್ಕೆ ಯಾವುದೇ ಅಧಿಕೃತ ದಾಖಲೆಯನ್ನು ನಮಗೆ ತೋರಿಸಿ. ನಿಮ್ಮನ್ನು ಗಡಿಪಾರು ಮಾಡಲು ನಾವೇಕೆ ನಿರ್ದೇಶಿಸಬಾರದು? ಎಂದು ಪ್ರಶ್ನಿಸಿತು. ಇದು ಪ್ರಚಾರಕ್ಕಾಗಿ ಹೂಡಿರುವ ಮೊಕದ್ದಮೆ ಎಂದು ಅದು ಕುಟುಕಿತು.

ಬಳಿಕ ತನ್ನ ಅರ್ಜಿಯನ್ನು ವಾಪಸ್ ತೆಗೆದುಕೊಳ್ಳಲು ಗೋಲ್ಡ್ ಸ್ಟೈನ್‌ಗೆ ನ್ಯಾಯಾಲಯವು ಅನುಮತಿ ನೀಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News