ಕರೂರ್ ಕಾಲ್ತುಳಿತ ದುರಂತ | ಶೀಘ್ರದಲ್ಲೇ ಘಟನಾ ಸ್ಥಳಕ್ಕೆ ಸುಪ್ರೀಂಕೋರ್ಟ್ ನಿಯೋಜಿತ ಸಮಿತಿ ಭೇಟಿ
Photo Credit : PTI
ಹೊಸದಿಲ್ಲಿ,ಅ.30: ತಮಿಳುನಾಡಿನ ಕರೂರಿನಲ್ಲಿ ಕಳೆದ ತಿಂಗಳು ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿ ಸಿಬಿಐ ನಡೆಸುತ್ತಿರುವ ತನಿಖೆಯ ಮೇಲ್ವಿಚಾರಣೆಗಾಗಿ ಸುಪ್ರೀಂಕೋರ್ಟ್‌ನಿಂದ ನಿಯೋಜಿತವಾದ ಸಮಿತಿಯು ಶೀಘ್ರದಲ್ಲೇ ಘಟನಾ ಸ್ಥಳಕ್ಕೆ ಭೇಟಿ ನೀಡಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭೇಟಿಗೆ ಮುನ್ನ ತನಿಖಾ ಸಮಿತಿಯು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರಕಾರಕ್ಕೆ ಪತ್ರವೊಂದನ್ನು ಬರೆದಿದ್ದು, ತ್ರಿಸದಸ್ಯ ಸಮಿತಿ ಹಾಗೂ ಸುಪ್ರೀಂಕೋರ್ಟ್ ಆದೇಶದಂತೆ ಕಾಲ್ತುಳಿತ ದುರಂತದ ತನಿಖೆ ನಡೆಸುತ್ತಿರುವ ಸಿಬಿಐ ನಡುವೆ ಮುಖ್ಯ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಸೂಚಿಸಿದೆ.
ಚಿತ್ರನಟ ವಿಜಯ್ ನೇತೃತ್ವದ ತಮಿಳಿಗ ವೇಟ್ರಿ ಕಳಗಂ ಪಕ್ಷದ ರ್ಯಾಲಿ ಸಂದರ್ಭ 41 ಮಂದಿಯನ್ನು ಬಲಿತೆಗೆದುಕೊಂಡ ಕಾಲ್ತುಳಿತದ ಘಟನೆಗೆ ಸಂಬಂಧಿಸಿ ಸಿಬಿಐ ತನಿಖೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯವು ಆಕ್ಟೋಬರ್ 12ರಂದು ಆದೇಶಿಸಿತ್ತು ಹಾಗೂ ತನಿಖೆಯ ಮೇಲ್ವಿಚಾರಣೆಗಾಗಿ ನಿವೃತ್ತ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ಗಡಿಭದ್ರತಾ ಪಡೆಯಿಂದ ನಿಯೋಜಿತವಾಗಿರುವ ಸುಮಿತ್ ಸಾರನ್ ಹಾಗೂ ಸಿಆರ್‌ಪಿಎಫ್‌ನ ಮಹಾನಿರೀಕ್ಷಕಿ ಸೋನಾಲ್ ವಿ. ಮಿಶ್ರಾ ಸಮಿತಿಯ ಇನ್ನಿಬ್ಬರು ಸದಸ್ಯರಾಗಿದ್ದಾರೆ.
ಕರೂರ್ ಕಾಲ್ತುಳಿತ ದುರಂತದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿರುವುದನ್ನು ಪ್ರಶ್ನಿಸಿ ತಮಿಳುನಾಡು ಸರಕಾರವು ಸುಪ್ರೀಂಕೋರ್ಟ್ ಮೆಟ್ಟಲೇರಿತ್ತು. ಆದಾಗ್ಯೂ, ಈ ದುರಂತಕ್ಕೆ ಸಂಬಂಧಿಸಿ ನ್ಯಾಯಾಲಯವು ರಾಜ್ಯ ಸರಕಾರದ ಮುಂದೆ ಹಲವು ಪ್ರಶ್ನೆಗಳನ್ನು ಇರಿಸಿತ್ತು. ಈ ಸ್ಥಳದಲ್ಲಿ ರ್ಯಾಲಿಯನ್ನು ನಡೆಸಲು ಇನ್ನೊಂದು ಪ್ರತಿಪಕ್ಷವಾದ ಎಡಿಎಂಕೆಗೆ ಅನುಮತಿಯನ್ನು ನೀಡದ ಆಡಳಿತವು, ಟಿವಿಕೆಗೆ ಯಾಕೆ ಅವಕಾಶ ನೀಡಿತ್ತು ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತ್ತು.