×
Ad

ನ್ಯಾಯಾಧೀಶರ ವಿರುದ್ಧ ‘‘ದುರುದ್ದೇಶಪೂರಿತ’’ ಆರೋಪ ಮಾಡುವ ಪ್ರವೃತ್ತಿ ಹೆಚ್ಚಳ: ಸುಪ್ರೀಂ ಕೋರ್ಟ್ ಕಳವಳ

Update: 2025-11-10 20:13 IST

ಸುಪ್ರೀಂ ಕೋರ್ಟ್ | Photo Credit : PTI

ಹೊಸದಿಲ್ಲಿ, ನ. 10: ನ್ಯಾಯಾಲಯದ ತೀರ್ಪುಗಳು ತಮ್ಮ ಪರವಾಗಿ ಬರದಿದ್ದಾಗ ಅರ್ಜಿದಾರರು ಮತ್ತು ವಕೀಲರು ನ್ಯಾಯಾಧೀಶರ ವಿರುದ್ಧ ದುರುದ್ದೇಶದ ಆರೋಪಗಳನ್ನು ಮಾಡುವ ‘‘ಆತಂಕಕಾರಿ ಪ್ರವೃತ್ತಿ’’ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

ದೂರುದಾರ ಎನ್. ಪೆಡ್ಡಿ ರಾಜು ಮತ್ತು ಇಬ್ಬರು ವಕೀಲರ ವಿರುದ್ಧ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸುತ್ತಾ ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಮತ್ತು ನ್ಯಾ. ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವೊಂದು ಈ ಹೇಳಿಕೆ ನೀಡಿತು. ನ್ಯಾಯಾಂಗ ನಿಂದನೆ ಎದುರಿಸುತ್ತಿರುವವರಿಗೆ ಎಚ್ಚರಿಕೆ ನೀಡಿದ ನ್ಯಾಯಾಲಯವು, ಇಂಥ ವರ್ತನೆಯು ನ್ಯಾಯಾಂಗ ವ್ಯವಸ್ಥೆಯ ಪಾವಿತ್ರ್ಯವನ್ನು ಹಾಳುಗೆಡವುತ್ತದೆ ಹಾಗೂ ಅದನ್ನು ‘‘ಬಲವಾಗಿ ಖಂಡಿಸಬೇಕು ಎಂದು ಹೇಳಿತು.

ತಪ್ಪಿತಸ್ಥ ದೂರುದಾರ ಮತ್ತು ಆತನ ಇಬ್ಬರು ವಕೀಲರು ಸಲ್ಲಿಸಿರುವ ಕ್ಷಮಾಪಣೆಗಳನ್ನು ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶರು ಸ್ವೀಕರಿಸಿರುವುದರಿಂದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಕ್ತಾಯಗೊಳಿಸಿತು.

‘‘ಇತ್ತೀಚಿನ ದಿನಗಳಲ್ಲಿ, ಅನುಕೂಲಕರ ತೀರ್ಪುಗಳನ್ನು ನೀಡದ ನ್ಯಾಯಾಧೀಶರ ವಿರುದ್ಧ ದುರುದ್ದೇಶದ ಆರೋಪಗಳನ್ನು ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇಂಥ ಪೃವೃತ್ತಿಯನ್ನು ಬಲವಾಗಿ ಖಂಡಿಸಬೇಕಾಗಿದೆ’’ ಎಂದು ತನ್ನ ಆದೇಶದಲ್ಲಿ ಮುಖ್ಯ ನ್ಯಾಯಾಧೀಶ ಹೇಳಿದರು.

ಎನ್. ಪೆಡ್ಡಿರಾಜು ಮತ್ತು ಅವರ ವಕೀಲರು ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶ ಮೌಶುಮಿ ಭಟ್ಟಾಚಾರ್ಯ ಅವರ ವಿರುದ್ಧ ಮಾನಹಾನಿಕರ ಆರೋಪಗಳನ್ನು ಮಾಡಿದ ಬಳಿಕ ಈ ಪ್ರಕರಣ ದಾಖಲಾಗಿತ್ತು. ಹೈಕೋರ್ಟ್ ನ್ಯಾಯಾಧೀಶರು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವೊಂದನ್ನು ರದ್ದುಗೊಳಿಸಿದ್ದರು. ನ್ಯಾಯಾಧೀಶರು ಪಕ್ಷಪಾತಪೂರಿತವಾಗಿ ಮತ್ತು ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸುತ್ತಾ, ಪ್ರಕರಣವನ್ನು ವರ್ಗಾಯಿಸುವಂತೆ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News