ಬೀದಿ ನಾಯಿಗಳ ಪ್ರಕರಣದ ಕುರಿತ ಆದೇಶ | ಮೇನಕಾ ಗಾಂಧಿ ಟೀಕೆಗೆ 'ಸುಪ್ರೀಂ' ಅಸಮಾಧಾನ
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ, ಜ. 20: ಬೀದಿ ನಾಯಿಗಳ ಪ್ರಕರಣದ ಕುರಿತ ತನ್ನ ಆದೇಶವನ್ನು ಟೀಕಿಸಿ ಮಾಜಿ ಸಚಿವೆ ಮೇನಕಾ ಗಾಂಧಿ ನೀಡಿದ ಹೇಳಿಕೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.
ಮೇನಕಾ ಗಾಂಧಿಯವರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ. ಅಂಜಾರಿಯಾ ಅವರ ಪೀಠ, ಮಾಜಿ ಸಚಿವೆ ಮೇನಕಾ ಗಾಂಧಿ ಅವರು ಯೋಚಿಸದೆ ಪ್ರತಿಯೊಬ್ಬರ ವಿರುದ್ಧ ಎಲ್ಲಾ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ತಿಳಿಸಿದೆ.
ಮೇನಕಾ ಗಾಂಧಿ ಅವರ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ರಾಜು ರಾಮಚಂದ್ರನ್ ಅವರನ್ನು ಪ್ರಶ್ನಿಸಿದ ಪೀಠ, “ನ್ಯಾಯಾಲಯ ತನ್ನ ಆದೇಶಗಳಲ್ಲಿ ಜಾಗರೂಕರಾಗಿರಬೇಕು ಎಂದು ನೀವು ಹೇಳಿದ್ದೀರಿ. ಆದರೆ, ಅವರು ಯಾವ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ನೀವು ನಿಮ್ಮ ಕಕ್ಷಿದಾರರಲ್ಲಿ ಕೇಳಿದ್ದೀರಾ? ನೀವು ಅವರ ಪಾಡ್ಕಾಸ್ಟ್ ಕೇಳಿದ್ದೀರಾ? ಅವರು ಯಾವುದೇ ರೀತಿಯಲ್ಲಿ ಆಲೋಚನೆ ಮಾಡದೆ ಪ್ರತಿಯೊಬ್ಬರ ವಿರುದ್ಧ ಎಲ್ಲಾ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ನೀವು ಅವರ ದೇಹಭಾಷೆಯನ್ನು ನೋಡಿದ್ದೀರಾ?” ಎಂದು ಪ್ರಶ್ನಿಸಿತು.
ಆದರೆ, ಔದಾರ್ಯದ ಕಾರಣಕ್ಕಾಗಿ ನ್ಯಾಯಾಲಯ ಮೇನಕಾ ಗಾಂಧಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.
ಬೀದಿ ನಾಯಿಗಳ ಸಮಸ್ಯೆ ಪರಿಹರಿಸಲು ಮನೇಕಾ ಗಾಂಧಿ ಅವರು ಬಜೆಟ್ನಲ್ಲಿ ಎಷ್ಟು ಹಣ ಮಂಜೂರು ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯವಾದಿ ರಾಜು ರಾಮಚಂದ್ರನ್ ಅವರನ್ನು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ರಾಜು ರಾಮಚಂದ್ರನ್, ತಾನು ಭಯೋತ್ಪಾದಕ ಅಜ್ಮಲ್ ಕಸಬ್ ಪರವಾಗಿಯೂ ನ್ಯಾಯಾಲಯದಲ್ಲಿ ಹಾಜರಾಗಿದ್ದೆ ಎಂದು ಹೇಳಿದರು ಹಾಗೂ ಇದು ಬಜೆಟ್ ಅನುದಾನ ನೀತಿಗೆ ಸಂಬಂಧಿಸಿದ ವಿಷಯ ಎಂದು ತಿಳಿಸಿದರು.
ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿಗಳು, “ಅಜ್ಮಲ್ ಕಸಬ್ ನ್ಯಾಯಾಂಗ ನಿಂದನೆ ಮಾಡಿಲ್ಲ. ಆದರೆ, ನಿಮ್ಮ ಕಕ್ಷಿದಾರರು ನ್ಯಾಯಾಂಗ ನಿಂದನೆ ಮಾಡಿದ್ದಾರೆ,” ಎಂದು ಹೇಳಿದರು.