×
Ad

ಉತ್ತರ ಪ್ರದೇಶ |ಶಾಲಾ ಮೈದಾನದಲ್ಲಿ ರಾಮಲೀಲಾ ಆಚರಿಸದಂತೆ ನಿರ್ಬಂಧಿಸಿದ್ದ ಅಲಹಾಬಾದ್ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

Update: 2025-09-25 20:02 IST

Photo Credit: The Hindu

ಹೊಸದಿಲ್ಲಿ,ಸೆ.25: ಉತ್ತರ ಪ್ರದೇಶದ ಫಿರೋಝ್ಪುರದ ಶಾಲಾ ಮೈದಾನದಲ್ಲಿ ರಾಮಲೀಲಾ ಆಚರಣೆಗೆ ನಿರ್ಬಂಧಿಸಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶಕ್ಕೆ ಸವೋಚ್ಚ ನ್ಯಾಯಾಲಯ ಗುರುವಾರ ತಡೆ ನೀಡಿದೆ.

ಹಲವಾರು ವರ್ಷಗಳಿಂದಲೂ ರಾಮಲೀಲಾ ಆಚರಣೆಯು ಅದೇ ಮೈದಾನದಲ್ಲಿ ನಡೆಯುತ್ತಿದೆ ಎನ್ನುವುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ,ಉಜ್ಜಲ ಭುಯಾನ್ ಮತ್ತು ಎನ್.ಕೆ.ಸಿಂಗ್ ಅವರ ಪೀಠವು ಮಕ್ಕಳ ಆಟವಾಡುವ ಅಥವಾ ಮೈದಾನವನ್ನು ಬಳಸುವ ಹಕ್ಕಿಗೆ ಯಾವುದೇ ಅಡ್ಡಿಯುಂಟಾಗಬಾರದು ಎಂಬ ಷರತ್ತಿನೊಂದಿಗೆ ಅದನ್ನು ಮುಂದುವರಿಸಲು ಅನುಮತಿ ನೀಡಿತು.

ನೋಟಿಸನ್ನು ಹೊರಡಿಸಿದ ಪೀಠವು, ಮೈದಾನವನ್ನು ಮಕ್ಕಳು ಬಳಸುವಂತಾಗಲು ಭವಿಷ್ಯದಲ್ಲಿ ರಾಮಲೀಲಾ ಉತ್ಸವಕ್ಕಾಗಿ ಪರ್ಯಾಯ ಸ್ಥಳವನ್ನು ವ್ಯವಸ್ಥೆ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸುವಂತೆ ಉಚ್ಚ ನ್ಯಾಯಾಲಯವನ್ನು ಆಗ್ರಹಿಸಿತು. ಆದಾಗ್ಯೂ ಉತ್ಸವಗಳು ಈಗಾಗಲೇ ಆರಂಭಗೊಂಡಿರುವುದನ್ನು ಗಮನಕ್ಕೆ ತೆಗೆದುಕೊಂಡ ಅದು, ಹಾಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಮೈದಾನದ ಬಳಕೆಯನ್ನು ನಿರ್ಬಂಧಿಸಿದ್ದ ಆದೇಶಕ್ಕೆ ಭಾಗಶಃ ತಡೆಯನ್ನು ನೀಡಿದೆ.

ಪ್ರದೀಪ ಸಿಂಗ್ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ಹೈಕೋರ್ಟ್ ಶಾಲಾ ಮೈದಾನದಲ್ಲಿ ರಾಮಲೀಲಾ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಕಾರ್ಯಕ್ರಮದ ಆಯೋಜಕರು, ಅದು ಆದೇಶವನ್ನು ಹೊರಡಿಸುವ ಮುನ್ನ ತಮ್ಮ ಅಹವಾಲನ್ನು ಆಲಿಸಿರಲಿಲ್ಲ ಎಂದು ವಾದಿಸಿದರು. ರಾಮಲೀಲಾ ಕಳೆದ 100 ವರ್ಷಗಳಿಂದಲೂ ಇದೇ ಮೈದಾನದಲ್ಲಿ ನಡೆಯುತ್ತಿದೆ ಎಂದು ಅವರ ಪರ ವಕೀಲರು ಬೆಟ್ಟು ಮಾಡಿದರು.

ಕಳೆದ ನೂರು ವರ್ಷಗಳಿಂದಲೂ ರಾಮಲೀಲಾ ಈ ಮೈದಾನದಲ್ಲಿ ನಡೆಯುತ್ತಿದ್ದರೂ ಮೊದಲೇ ಏಕೆ ನ್ಯಾಯಾಲಯವನ್ನು ಸಂಪರ್ಕಿಸಿರಲಿಲ್ಲ ಎಂದು ಪೀಠವು ಪಿಐಎಲ್ ಅರ್ಜಿದಾರ ಸಿಂಗ್ ಅವರನ್ನು ತರಾಟೆಗೆತ್ತಿಕೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News